ಬೆಳಗಾವಿಯ ಅಂಬೇವಾಡಿ ಗ್ರಾಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ನಿಮಿತ್ತ ನಿರ್ಮಿಸಲಾಗಿರುವ ಐತಿಹಾಸಿಕ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಶಿವಶಕ್ತಿ ಯುವಕ ಮಂಡಳದ ವತಿಯಿಂದ ತಯಾರಾದ ರಾಮಾಯಣದ ಧನುಷ್ಯ ಮುರಿಯುವ ಪ್ರಸಂಗದ ಅದ್ಭುತ ದೃಶ್ಯವನ್ನು ವೀಕ್ಷಿಸಲು ನೂರಾರು ಭಕ್ತರು ಹರಿದುಬರುತ್ತಿದ್ದಾರೆ.


ಬೆಳಗಾವಿ ನಗರದ ಮಾರುತಿ ಗಲ್ಲಿ, ಅಂಬೇವಾಡಿಯ ಶಿವಶಕ್ತಿ ಯುವಕ ಮಂಡಳ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದ ವತಿಯಿಂದ ಈ ವರ್ಷವೂ ವಿಭಿನ್ನ ಹಾಗೂ ಆಕರ್ಷಕ ಪೌರಾಣಿಕ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ಗಣೇಶೋತ್ಸವದ ವಿಶೇಷ ಸಂದರ್ಭದಲ್ಲಿ ರಾಮಾಯಣದ ಪ್ರಮುಖ ಘಟನೆಯಾದ ಸೀತಾಮಾತೆಯ ಸ್ವಯಂವರ, ಮಿಥಿಲಾ ನಗರಿಯ ಸೌಂದರ್ಯ ಹಾಗೂ ಪ್ರಭು ಶ್ರೀರಾಮನು ಶಿವಧನುಸ್ಸನ್ನು ಮುರಿಯುವ ರೋಚಕ ದೃಶ್ಯವನ್ನು ಇಲ್ಲಿ ಕಲಾತ್ಮಕವಾಗಿ ಮರುಸೃಷ್ಟಿಸಲಾಗಿದೆ.

ಈ ಅದ್ಭುತ ಕಲಾಕೃತಿಗಳನ್ನು ರೂಪಿಸಲು ಮಂಡಳಿಯ ಯುವ ಕಾರ್ಯಕರ್ತರು ಕಳೆದ 30 ರಿಂದ 40 ದಿನಗಳಿಂದ ಹಗಲಿರುಳು ಶ್ರಮಿಸಿದ್ದಾರೆ. ಶಿವಾಜಿ ಮಹಾರಾಜರ ಕಾಲದ ಇತಿಹಾಸ ಹಾಗೂ ಮಹಾಭಾರತದ ಘಟನೆಗಳನ್ನು ಬಿಂಬಿಸುವ ಇಂತಹ ಕಲಾಕೃತಿಗಳು ಕೇವಲ ಅಂಬೇವಾಡಿ ಮಾತ್ರವಲ್ಲದೆ, ಸುತ್ತಮುತ್ತಲಿನ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ.

ದಿನದಿಂದ ದಿನಕ್ಕೆ ಈ ಸ್ಥಳಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನಸಾಗರವೇ ಹರಿದುಬರುತ್ತಿದೆ. ಸಂಘಟಕರು ಎಲ್ಲ ಗಣೇಶ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯುವಕರ ಪರಿಶ್ರಮದಿಂದ ಮೂಡಿಬಂದಿರುವ ಈ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವಂತೆ ಸವಿನಯ ವಿನಂತಿ ಕೋರಿದ್ದಾರೆ.

