ಬೆಳಗಾವಿ ನಗರದಲ್ಲಿ ಚಂದ್ರಪ್ರಭ ಜೈನ ಶ್ವೇತಾಂಬರ ಮೂರ್ತಿಪೂಜಕ್ ಸಂಘದ ವತಿಯಿಂದ ಚಾತುರ್ಮಾಸ ಪೂರ್ಣಾವತಿ ಹಾಗೂ ವಿಶೇಷ ಪ್ರವಚನ ನಿಮಿತ್ತ ಭಗವಾನ್ ಮಹಾವೀರ ಸ್ವಾಮಿಯ ಭವ್ಯ ಶೋಭಾಯಾತ್ರೆ ಅತ್ಯಂತ ಅದ್ದೂರಿಯಾಗಿ ಜರುಗಿತು.


ಬೆಳಗಾವಿ ನಗರದಲ್ಲಿ ಶ್ರೀ ಬೆಳಗಾವಿ ಚಂದ್ರಪ್ರಭ ಜೈನ ಶ್ವೇತಾಂಬರ ಮೂರ್ತಿಪೂಜಕ್ ಸಂಘ ಹಾಗೂ ಮಾರವಾಡಿ ಶ್ವೇತಾಂಬರ ಜೈನ್ ಸಂಘದ ವತಿಯಿಂದ ಚಾತುರ್ಮಾಸ ಪೂರ್ಣಾವತಿಯ ಅಂಗವಾಗಿ ಭಗವಾನ್ ಮಹಾವೀರ ಸ್ವಾಮಿಯ ಭವ್ಯ ಮೆರವಣಿಗೆಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಎರಡು ತಿಂಗಳ ವ್ರತ ಹಾಗೂ ಧಾರ್ಮಿಕ ಅನುಷ್ಠಾನಗಳು ಪೂರ್ಣಗೊಂಡ ಬಳಿಕ ಆಯೋಜಿಸಲಾದ ಈ ವಿಶೇಷ ಕಾರ್ಯಕ್ರಮಕ್ಕೆ ಸಮಸ್ತ ನಾಗರಿಕರಿಂದ ಅಭೂತಪೂರ್ವ ಸಹಕಾರ ದೊರೆಯಿತು.ಈ ಅದ್ದೂರಿ ಶೋಭಾಯಾತ್ರೆಯಲ್ಲಿ 451ನೇ ದೀಕ್ಷಾ ದಾನೇಶ್ವರಿ ಗುಣವಂತರಿ ಮಹಾರಾಜ್ ಸಾಹೇಬ್ ಅವರ ಶಿಷ್ಯರತ್ನ ಹಾಗೂ ಬೆಳಗಾವಿ ರತ್ನ ಗೌತಮರತ್ನ ವಿಜಯಜಿ ಮಹಾರಾಜ್ ಸಾಹೇಬ್ ಅವರ ನಿಷ್ಠೆಯಂತೆ ಪ್ರವಚನ ಸಂಘಟಿಸಲಾಯಿತು.

ಮೆರವಣಿಗೆಯಲ್ಲಿ ಕಣ್ಮನ ಸೆಳೆಯುವ ಸುಂದರವಾದ 1 ಬೆಳ್ಳಿಯ ರಥ, 4 ಭವ್ಯ ಕುದುರೆಗಳು ಮತ್ತು ಮಂತ್ರಮುಗ್ಧಗೊಳಿಸುವ ಬಸ್‌ವಾಣಿ ಬ್ಯಾಂಡ್ ವಿಶೇಷ ಮೆರುಗನ್ನು ತಂದಿದ್ದವು. ವರ್ಷಕ್ಕೊಮ್ಮೆ ಮಾತ್ರ ಜೈನ್ ಧರ್ಮದಲ್ಲಿ ಈ ರೀತಿಯ ವಿಶೇಷ ಶೋಭಾಯಾತ್ರೆಯನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮದ ಪೂರ್ಣಾವತಿಯ ನಂತರ ಆಗಮಿಸಿದ್ದ ಭಕ್ತರಿಗಾಗಿ ಉಪಾಶ್ರಯ ಭವನದಲ್ಲಿ ಮಹಾ ಪ್ರಸಾದ ಹಾಗೂ ಸ್ವಾಮಿ ವತ್ಸಲದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು ಎಂದು ಮಹೇಶ್ ಪೋರವಾಲ್ ತಿಳಿಸಿದ್ದಾರೆ.
ಈ ಪವಿತ್ರ ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಾದ ಬೇಂಡಿ ಬಝಾರ್, ಖಡೇ ಬಝಾರ್, ರಾಮದೇವ ಗಲ್ಲಿ, ಮಾರುತಿ ಗಲ್ಲಿ, ಕಲ್ಮಠ ರಸ್ತೆ ಹಾಗೂ ಮೆಣಸೆ ಗಲ್ಲಿ ಮಾರ್ಗವಾಗಿ ಸಾಗಿ ಪಾಂಗುಳ ಗಲ್ಲಿಗೆ ತಲುಪಿ ಕೊನೆಗೊಂಡಿತು.
