Kagawad

ಶೇಡಬಾಳ: ಡಾ. ಶೀತಲ್ ನ್ಯಾಮಗೌಡರ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

Share

ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಹೆಸರಾಂತ ಸ್ತ್ರೀರೋಗ ತಜ್ಞೆ ಡಾ. ಶೀತಲ್ ನ್ಯಾಮಗೌಡರ್ ಅವರ ಆಶಾ-ಪ್ರಭು ಆಸ್ಪತ್ರೆಯಲ್ಲಿ, ಅವರ ತಂದೆ ದಿವಂಗತ ಪಿ.ಡಿ. ನ್ಯಾಮಗೌಡರ್ ಅವರ ಪುಣ್ಯಸ್ಮರಣೆ ಹಾಗೂ ಗಣೇಶೋತ್ಸವದ ನಿಮಿತ್ತ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಶಿಬಿರದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ಉಚಿತ ಆರೋಗ್ಯ ಸೇವೆಗಳ ಪ್ರಯೋಜನ ಪಡೆದರು. ರವಿವಾರ ಶೇಡಬಾಳದ ಆಶಾ-ಪ್ರಭು ಆಸ್ಪತ್ರೆಯಲ್ಲಿ ಸಾಂಗ್ಲಿ ಜಿಲ್ಲೆಯ ವಿಟಾ ತಾಲೂಕಿನ ವಿಟಾ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಅಜರ ಜಮಾದಾರ್ ಅವರ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 80 ಯುವಕರು ರಕ್ತದಾನ ಮಾಡಿದರು.

ಗುರುವಾರ ದಿನಾಂಕ 11ರಿಂದ 13ರವರೆಗೆ ಗರ್ಭಿಣಿಯರಿಗೆ ಉಚಿತ ಸೋನೋಗ್ರಾಫಿ ಹಾಗೂ ಇತರ ರೋಗಿಗಳಿಗೆ ಉಚಿತ ಇಸಿಜಿ ಮತ್ತು ಎಕ್ಸ್ರೇ ಸೇವೆಗಳನ್ನು ಒದಗಿಸಲಾಯಿತು.

ರವಿವಾರ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಸದಸ್ಯರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಸುಮಾರು 200 ಮಹಿಳೆಯರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶೀತಲ್ ನ್ಯಾಮಗೌಡರ್, “ಕಳೆದ ಎರಡು ವರ್ಷಗಳಿಂದ ನಮ್ಮ ತಂದೆ ಪಿ.ಡಿ. ನ್ಯಾಮಗೌಡರ್ ಅವರ ಪುಣ್ಯಸ್ಮರಣೆ ನಿಮಿತ್ತ ಆಸ್ಪತ್ರೆಯಲ್ಲಿ ವಿವಿಧ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ಕಾರ್ಯಕ್ರಮಗಳ ಮೂಲಕ ಅನೇಕ ಅಗತ್ಯವಿರುವ ಮಹಿಳೆಯರಿಗೆ ನೆರವಾಗುತ್ತಿರುವುದು ನಮಗೆ ತೃಪ್ತಿ ನೀಡುತ್ತಿದೆ” ಎಂದು ಹೇಳಿದರು.

ಸಹ ಶಿಕ್ಷಕಿ ಶ್ರೀಮತಿ ಶಶಿಕಲಾ ಗಲಗಲಿ ಮಾತನಾಡಿ, “ಡಾ. ಶೀತಲ್ ನ್ಯಾಮಗೌಡರ್ ಅವರು ಸ್ತ್ರೀರೋಗ ತಜ್ಞರಾಗಿ ತಮ್ಮ ಆಸ್ಪತ್ರೆಯ ಮೂಲಕ ಅನೇಕ ಸೇವೆಗಳನ್ನು ನೀಡುತ್ತಿದ್ದಾರೆ. ಅದರ ಜೊತೆಗೆ ಪ್ರತಿವರ್ಷ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಡಿ ತುಂಬುವ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಅವರ ಸಮಾಜಮುಖಿ ಸೇವೆ ವಿಶೇಷವಾಗಿದೆ” ಎಂದು ಹೇಳಿದರು.

ರಕ್ತದಾನ ಶಿಬಿರದ ಉದ್ಘಾಟನೆಯಲ್ಲಿ ಶೇಡಬಾಳ ನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ್, ಸದಸ್ಯ ಸಚಿನ್ ಜಗತಪ್ ಸೇರಿದಂತೆ ನಗರ ಪಂಚಾಯಿತಿ ಸದಸ್ಯರು, ಮಹೇಶ್ ಘೊರ್ಪಡೆ, ಅನುಷಯ ನಾಯ್ಕ್, ಪ್ರಜ್ವಲ್ ಗಣಿ, ವಿನೋದ ನ್ಯಾಮಗೌಡರ್, ಅಮೃತಾ ನಾಯಿಕ, ಆರತಿ ಪೂಜಾರಿ, ಕೌಶರ ನಾಯಿಕವಾಡಿ, ರೋಹಿತ ರಾಜಮಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸಹ ಶಿಕ್ಷಕ ಸುನಿಲ್ ಮಾಲಗಾವೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:

error: Content is protected !!