Kagawad

ಐನಾಪುರದ ಕೆಆರ್‌ಇಎಸ್ ಶಿಕ್ಷಣ ಸಂಸ್ಥೆಯಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ

Share

ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಗುರು-ಶಿಷ್ಯರ ಬಾಂಧವ್ಯಕ್ಕೆ ವಿಶೇಷ ಮಹತ್ವವಿತ್ತು. ಶಿಕ್ಷಕರನ್ನು ಹಾಗೂ ಜನ್ಮ ನೀಡಿದ ತಂದೆ-ತಾಯಿಯರನ್ನು ಗೌರವಿಸುವ ಸಂಸ್ಕಾರ ವಿದ್ಯಾರ್ಥಿಗಳಲ್ಲಿ ಬೆಳೆಸಲಾಗುತ್ತಿತ್ತು. ಆದರೆ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಹಲವು ಬದಲಾವಣೆಗಳಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆಗೆ ಸೌಜನ್ಯತೆ, ಗುರು-ಹಿರಿಯರ ಬಗ್ಗೆ ಗೌರವ ಹಾಗೂ ಆದರ ಭಾವನೆಯನ್ನು ಬೆಳೆಸಲು ಪ್ರಯತ್ನಿಸಬೇಕು ಎಂದು ಅಥಣಿಯ ಖ್ಯಾತ ನ್ಯಾಯವಾದಿ ಹಾಗೂ ಶಿಕ್ಷಣ ಪ್ರೇಮಿ ಎ.ಎಂ. ಕೊಬ್ಬರಿ ಹೇಳಿದರು.

ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಕೆಆರ್‌ಇಎಸ್ ಶಿಕ್ಷಣ ಸಂಸ್ಥೆ ಹಾಗೂ ಕಮಲಾ ವಾಸುದೇವ ಮಾವುಲಿ ಫೌಂಡೇಶನ್‌ ಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿವಂಗತ ಜೆ.ಎಂ. ದೇಶಪಾಂಡೆ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನ್ಯಾಯವಾದಿ ಎ.ಎಂ. ಕೊಬ್ಬರಿ, ಶಾಲಾ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಕುರಿತು ಸೂಕ್ತ ಮಾಹಿತಿ ನೀಡುವುದು ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ, ಆರೋಪಿಯು ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಕೆಆರ್‌ಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿವಂಗತ ಜೆ.ಎಂ. ದೇಶಪಾಂಡೆ ಅವರ ಜನ್ಮದಿನಾಚರಣೆಯ ಅಂಗವಾಗಿ ಸಂಸ್ಥೆಯ ಉಪಾಧ್ಯಕ್ಷ ಸಂಜಯ್ ಬಿರಡಿ ಹಾಗೂ ಅತಿಥಿಗಳ ಉಪಸ್ಥಿತಿಯಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಮಧುಸೂದನ್ ಮಾವುಲಿ ಅವರು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಂಸ್ಥೆಗೆ ಸುಮಾರು 60 ಕಂಪ್ಯೂಟರ್‌ಗಳನ್ನು ನೀಡುವುದರ ಜೊತೆಗೆ ಸಭಾಭವನ ನಿರ್ಮಾಣಕ್ಕೂ ಸಹಕಾರ ನೀಡಿದ್ದಾರೆ. ಅವರ ಶೈಕ್ಷಣಿಕ ಸೇವೆಯನ್ನು ಕಾರ್ಯಕ್ರಮದಲ್ಲಿ ಅತಿಥಿಗಳು ಕೊಂಡಾಡಿದರು.

ಶಿಕ್ಷಣ ಸಂಸ್ಥೆಯ ಹಿರಿಯ ನಿವೃತ್ತ ಮುಖ್ಯಶಿಕ್ಷಕ ಸಿ.ಎಂ. ಯಾದವಾಡ ಹಾಗೂ 83 ವರ್ಷದ ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಾ ದೇಶಪಾಂಡೆ ಅವರನ್ನು ಕುಟುಂಬದ ಸದಸ್ಯರೊಂದಿಗೆ ಸನ್ಮಾನಿಸಿ, ಅವರ ಸುದೀರ್ಘ ಸೇವೆಯನ್ನು ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಸಿ.ಎಂ. ಯಾದವಾಡ ಹಾಗೂ ಶ್ರೀಮತಿ ಪುಷ್ಪಾ ದೇಶಪಾಂಡೆ ಅವರು ತಮ್ಮ ಸೇವಾವಧಿಯಲ್ಲಿದ್ದ ಶಿಕ್ಷಣ ಪದ್ಧತಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಮತ್ತು ವಿದ್ಯಾರ್ಥಿಗಳು ಗುರುಗಳಿಗೆ ನೀಡುತ್ತಿದ್ದ ಗೌರವದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮಧುಸೂದನ್ ಮಾವುಲಿ ಅವರು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಮುಂದೆಯೂ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಪೋತದಾರ್ ಮಾತನಾಡಿ, ಹಿರಿಯರು ಹಾಗೂ ಶಿಕ್ಷಣ ಸಂಸ್ಥೆಯ ಬಗ್ಗೆ ಇರುವ ಗೌರವ ಮತ್ತು ಆದರದ ಭಾವನೆಯನ್ನು ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಉದಯ ನಿಡಗುಂದಿ, ಸುರೇಶ್ ಗಾಣಿಗೇರ್, ಪ್ರವೀಣ ಕುಲಕರ್ಣಿ, ಸಂತೋಷ್ ಪಾಟೀಲ್, ತಮ್ಮಣ್ಣ ಪರಶೆಟ್ಟಿ ಸೇರಿದಂತೆ ಐನಾಪುರದ ಅನೇಕ ಗಣ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.

ಪ್ರಾಚಾರ್ಯ ಎ.ಎಂ. ಹುಲ್ಲೇನವರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕ ಎ.ಎಸ್. ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯ ಡಾ. ಬಿ. ಪ್ರೇಮನಂದ್ ವಂದಿಸಿದರು.

ಸುಕುಮಾರ್ ಬನ್ನುರೆ
ಇನ್ನನ್ಯೂಸ ಕಾಗವಾಡ

Tags:

error: Content is protected !!