ಬೆಳಗಾವಿಯ ವಡಗಾಂವನ ಅಷ್ಟವಿನಾಯಕ ನಗರದಲ್ಲಿ ಗಣೇಶನ ಭವ್ಯ ಆಗಮನೋತ್ಸವವು ಅತ್ಯಂತ ಸಡಗರ ಮತ್ತು ವೈಭವದಿಂದ ಜರುಗಿತು. ಮಹಾರಾಷ್ಟ್ರದ ಮಾದರಿಯಲ್ಲಿ ನಡೆದ ಈ ಅದ್ಭುತ ಆಗಮನೋತ್ಸವವನ್ನು ಕಣ್ತುಂಬಿಕೊಳ್ಳಲು ಸುಮಾರು 20 ರಿಂದ 25 ಸಾವಿರಕ್ಕೂ ಅಧಿಕ ಭಕ್ತರು ಹಾಗೂ ಯುವಕರು ಉಪಸ್ಥಿತರಿದ್ದರು.


ಬೆಳಗಾವಿಯ ವಡಗಾಂವನ ಅಷ್ಟವಿನಾಯಕ ನಗರದಲ್ಲಿ ಆಯೋಜಿಸಲಾದ ಗಣೇಶನ ಭವ್ಯ ಆಗಮನೋತ್ಸವವು ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿತ್ತು. ಢೋಲ್ ತಾಶಾ ಹಾಗೂ ಪಾರಂಪರಿಕ ವಾದ್ಯಗಳ ತಾಳಕ್ಕೆ ತಕ್ಕಂತೆ ನಡೆದ ಈ ಭವ್ಯ ಮೆರವಣಿಗೆಯು ನೆರೆದಿದ್ದ ಪ್ರತಿಯೊಬ್ಬರ ಗಮನ ಸೆಳೆಯಿತು. ಡಿಸಿಪಿ ನಾರಾಯಣ್ ಬರಮನಿ ಸೇರಿದಂತೆ ಮುಖಂಡರು ಹಾಗೂ ಗಣ್ಯರು ಆರತಿ ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮಹಾರಾಷ್ಟ್ರದ ನಂತರ ಅತ್ಯಂತ ಆಕರ್ಷಕವಾದ ಕ್ರ್ಯಾಕರ್ ಶೋ ಹಾಗೂ ವಿಜೃಂಭಣೆಯ ಆಗಮನೋತ್ಸವವನ್ನು ಕಣ್ತುಂಬಿಕೊಳ್ಳಲು ಸುಮಾರು 20 ರಿಂದ 25 ಸಾವಿರ ಭಕ್ತರು ಮತ್ತು ಯುವಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಈ ವೇಳೆ ಶ್ರೀರಾಮಸೇನಾ ಹಿಂದೂಸ್ಥಾನದ ಸಂಸ್ಥಾಪಕ ರಮಾಕಾಂತ್ ಕೊಂಡೂಸ್ಕರ್ ಮಾತನಾಡಿ, ಮಹಾರಾಷ್ಟ್ರದ ಬಳಿಕ ಕರ್ನಾಟಕದ ಬೆಳಗಾವಿಯಲ್ಲಿ ಗಣೇಶೋತ್ಸವಕ್ಕೂ ಮುನ್ನ ಗಣೇಶನ ಆಗಮನೋತ್ಸವವನ್ನು ಅತ್ಯಂತ ವೈಭವದಿಂದ ಆಯೋಜಿಸಲಾಗುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಜಮುಖಿ ಹಾಗೂ ಸಾಮಾಜಿಕ ಉಪಕ್ರಮಗಳನ್ನು ಕೂಡ ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು.

ಇನ್ನು ಮಹಾಮಂಡಳದ ಪ್ರಮುಖರಾದ ಸಾಗರ್ ಪಾಟೀಲ್ ಮತ್ತು ಸುನೀಲ್ ಜಾಧವ್ ಮಾತನಾಡಿ, ಬೆಳಗಾವಿಯಲ್ಲಿ ಇಂದು ಅತ್ಯಂತ ಸಡಗರದಿಂದ ವಡಗಾಂವ ಅಷ್ಠವಿನಾಯಕ ನಗರದ ಗಣೇಶನ ಭವ್ಯ ಆಗಮನೋತ್ಸವ ಜರುಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಗಣೇಶೋತ್ಸವವನ್ನು ಆಚರಿಸುವಾಗ ಭಕ್ತರು, ಮಹಿಳೆಯರು, ಮಕ್ಕಳು ಮತ್ತು ಚಿಣ್ಣರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಶಾಂತಿ-ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಾವಿಕ ಭಕ್ತರು ಭಾಗಿಯಾಗಿದ್ಧರು.
