ವಿದೇಶದಲ್ಲಿ 770 ಕೋಟಿ ರೂ. ಹೂಡಿಕೆ ಮಾಡಿರುವ ವಿಚಾರ ಸತ್ಯಕ್ಕೆ ದೂರ. ವಿದೇಶದಲ್ಲಿ ಸತೀಶ್ ಅವರ ಹೂಡಿಕೆ ಇಲ್ಲ. ರಾಹುಲ್ ಜಾರಕಿಹೊಳಿ 25 ಸಾವಿರ ರೂ., ಪ್ರಿಯಾಂಕಾ ಜಾರಕಿಹೊಳಿ 25 ಸಾವಿರ ರೂ. ಹಾಗೂ ಸಹೋದರಿ ಮಹಾದೇವಿ 25 ಸಾವಿರ ರೂ. ಹೂಡಿಕೆ ಮಾಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ರಾಜಕಾರಣದಲ್ಲಿ ನಮ್ಮ ಕುಟುಂಬದ ಹೆಸರು ಕೆಡಿಸಬೇಡಿ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ಗೋಕಾಕಿನ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗೋಕಾಕಿನ ನಿವಾಸದಲ್ಲಿ ಒಟ್ಟು 1.73 ಕೋಟಿ ರೂ. ಹಣ ಸೀಜ್ ಮಾಡಲಾಗಿದೆ. 2 ಟ್ರಂಕ್ ತಂದಿದ್ದರು, ಅದರಲ್ಲಿ ಒಂದೇ ಟ್ರಂಕಿನಲ್ಲಿ ಹಣ ಸೀಜ್ ಮಾಡಿ ಒಯ್ಯಲಾಗಿದೆ. ಬೇರೆ ಕಡೆ ಹಣ ಸೀಜ್ ಬಗ್ಗೆ ನನಗೆ ಮಾಹಿತಿ ಇಲ್ಲ. 1.73 ಕೋಟಿ ರೂ. ಹಣದ ಲೆಕ್ಕ ನಮ್ಮ ಬಳಿ ಈಗಾಗಲೇ ಇದೆ. ಲೆಕ್ಕ ಕೊಟ್ಟು ಹಣ ಬಿಡುಗಡೆ ಮಾಡಿಸುವ ಕಾರ್ಯ ಆಗುತ್ತದೆ ಎಂದರು.
ಸತೀಶ್ ಜಾರಕಿಹೊಳಿ ಮೇಲಿನ ದಾಳಿ ರಾಜಕೀಯ ಪ್ರೇರಿತವಲ್ಲ. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದಾಳಿ ಕುರಿತು ಸತೀಶ್ ಜಾರಕಿಹೊಳಿ ಕಾನೂನು ಹೋರಾಟ ಮಾಡುತ್ತಾರೆ. ಇದೊಂದು ಸಾಮಾನ್ಯ ದಾಳಿ ಅಷ್ಟೇ ಎಂದ ಅವರು, ದಾಳಿ ಹಿಂದೆ ಸಿದ್ದರಾಮಯ್ಯ ಕೈವಾಡ ಎನ್ನುವ ತಪ್ಪು ಸಂದೇಶ ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಹಾಗೂ ಸತೀಶ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಳೆದ 30 ವರ್ಷದ ಗೆಳೆತನದಲ್ಲಿ ಅವರು 10 ಬಾರಿ ಜಗಳವಾಡಿಕೊಂಡು ಮತ್ತೆ ಕೂಡಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಹಾಗೂ ಸತೀಶ್ ನಡುವಿನ ಸಂಬಂಧ ಕೆಡಿಸುವ ಕೆಲಸ ಮಾಡಬೇಡಿ. ಇಬ್ಬರೂ ಅಹಿಂದದ ಕಣ್ಣುಗಳು ಇದ್ದಂತೆ. ಆ ಎರಡು ಕಣ್ಣುಗಳಿಗೆ ಪೆಟ್ಟು ಬಿದ್ದರೆ ಅಹಿಂದ ಸಂಘಟನೆಗೆ ಪೆಟ್ಟು ಬೀಳುತ್ತದೆ. ಅವರಿಬ್ಬರ ಸಂಬಂಧ ಇನ್ನೂ ಗಟ್ಟಿಯಾಗರಲಿ ಎಂದು ತಿಳಿಸಿದರು.
ಮೇ ತಿಂಗಳಲ್ಲಿ ಇ.ಡಿಗೆ ದೂರು ಹೋಗುತ್ತದೆ. ಜೂನ್ ತಿಂಗಳಲ್ಲಿ ಮಂಜುನಾಥ ಅವರ ಮನೆ ಮೇಲೆ ದಾಳಿ ಆಗುತ್ತದೆ. ಆ ದಾಳಿ ಹಿನ್ನೆಲೆಯಲ್ಲಿ ಸತೀಶ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿ ಕುರಿತು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಆದರೆ, 25 ಸಾವಿರ ರೂ. ವಿದೇಶದಲ್ಲಿ ಹೂಡಿಕೆಗೆ ದಾಳಿ ಮಾಡಿರುವುದು ನಮಗೂ ಆಶ್ಚರ್ಯವಾಗಿದೆ ಎಂದು ಬೇಸರ ಹೊರಹಾಕಿದರು.
ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ದಾಳಿಗೆ ರಾಜಕೀಯ ಬಣ್ಣ ಕೊಡುವುದು ಬೇಡ. ರಾಜಕಾರಣ ಬೇರೆ, ಕುಟುಂಬದ ವಿಷಯದಲ್ಲಿ ನಾವೆಲ್ಲ ಒಂದೇ. ಬಿಜೆಪಿ ಶಾಸಕನಾಗಿ ನಾನು ಇಲ್ಲಿಗೆ ಬಂದಿಲ್ಲ. ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಇ.ಡಿ ವಿಚಾರಣೆಗೆ ಬರುವಂತೆ ರಾಹುಲ್ಗೆ ತಿಳಿಸಿಲ್ಲ. ಹೇಳಿಕೆ ಪಡೆದು ಹೋಗಿದ್ದಾರೆ. ಸತೀಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ ಎನ್ನುವ ಮೂಲಕ ಸತೀಶ್ ಅವರನ್ನು ಬಾಲಚಂದ್ರ ಜಾರಕಿಹೊಳಿ ಸಮರ್ಥಿಸಿಕೊಂಡರು.
