ವಿಜಯಪುರ–ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿಯ ಗೊಳಸಂಗಿ ಗ್ರಾಮದ ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂನಿಂದ ₹19.29 ಲಕ್ಷ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 2ರಂದು ಬೆಳಗಿನ ಜಾವ ಸುಮಾರು 2.30ಕ್ಕೆ ಆರೋಪಿಗಳು ಗ್ಯಾಸ್ ಕಟರ್ ಬಳಸಿ ಎಟಿಎಂ ಶೆಟರ್ನ ಬೀಗ ಕತ್ತರಿಸಿ ಒಳನುಗ್ಗಿದ್ದಾರೆ. ಬಳಿಕ ಎಟಿಎಂ ಸೇಫ್ನ್ನು ಗ್ಯಾಸ್ ಕಟರ್ನಿಂದ ಕತ್ತರಿಸಿ, ಅದರಲ್ಲಿದ್ದ ₹19.29 ಲಕ್ಷ ಹಣವಿದ್ದ ಕ್ಯಾಶೆಟ್ ಸಮೇತ ಪರಾರಿಯಾಗಿದ್ದರು ಎಂದು ಹೇಳಿದರು.
ಕೆನರಾ ಬ್ಯಾಂಕ್ ಗೊಳಸಂಗಿ ಶಾಖೆಯ ವ್ಯವಸ್ಥಾಪಕ ಶರಣಪ್ಪ ನೀಡಿದ ದೂರಿನ ಆಧಾರದ ಮೇಲೆ ಕೂಡಗಿ ಪೊಲೀಸರು ಬಿಎನ್ಎಸ್-2023ರ ಸೆಕ್ಷನ್ 331(4) ಮತ್ತು 305ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿತ್ತು.
ತನಿಖೆ ವೇಳೆ ಘಟನಾ ಸ್ಥಳ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಅನುಮಾನಾಸ್ಪದ ಸ್ಕಾರ್ಪಿಯೊ ವಾಹನವು ಮಧ್ಯಪ್ರದೇಶದತ್ತ ತೆರಳಿರುವುದನ್ನು ಪತ್ತೆಹಚ್ಚಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿಯ ಆಧಾರದ ಮೇಲೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕಾನ್ವನ್ ಪೊಲೀಸರು ಸೆಪ್ಟೆಂಬರ್ 3ರಂದು ದೆಹಲಿ–ಮುಂಬೈ ರಾಷ್ಟ್ರೀಯ ಹೆದ್ದಾರಿಯ ಘಟ್ಟಾ–ನಾಗ್ದಾ–ನೀಮಚ್ ಟೋಲ್ ನಾಕಾ ಬಳಿ ಅನುಮಾನಾಸ್ಪದ ಸ್ಕಾರ್ಪಿಯೊ ವಾಹನವನ್ನು ತಡೆದು ಇಬ್ಬರನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಜಯಪುರ ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಸಾಹಿಲ್ (24), ಹರಿಯಾಣದ ಪಾಲ್ವಾಲ್ ಜಿಲ್ಲೆಯ ಧಿರಂಕಿ ನಿವಾಸಿ; ಕಮರಿಯಾಬ್ (50), ಉತ್ತರ ಪ್ರದೇಶದ ಮೀರಠ ಜಿಲ್ಲೆಯ ಮುಂಡಾಳಿ ಠಾಣೆ ವ್ಯಾಪ್ತಿಯ ಸಪೀಯಾಬಾದ್ ಲೌಟಿ ನಿವಾಸಿ; ಹಾಗೂ ಆಕಾಶ್ (27), ಮೀರಠ ಜಿಲ್ಲೆಯ ಬಿಲಿ ನಿವಾಸಿ ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ಹರಿಯಾಣ ಮತ್ತು ಉತ್ತರ ಪ್ರದೇಶದ ಒಟ್ಟು ಆರು ಮಂದಿ ಸೇರಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ರೂಢಿಗತ ಕಳ್ಳರಾಗಿದ್ದು, ಗೂಗಲ್ ಮ್ಯಾಪ್ ಮೂಲಕ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಎಟಿಎಂಗಳನ್ನು ಗುರುತಿಸಿ, ತಮಗೆ ಅನುಕೂಲವಾಗುವ ಎಟಿಎಂಗಳನ್ನು ಆಯ್ಕೆ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗೊಳಸಂಗಿ ಎಟಿಎಂ ದರೋಡೆಗೂ ಇದೇ ರೀತಿಯಲ್ಲಿ ಸಂಚು ರೂಪಿಸಿ ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಿಂದ ₹3.60 ಲಕ್ಷ ನಗದು, MH-12-XH-5112 ನೋಂದಣಿ ಸಂಖ್ಯೆಯ ಸ್ಕಾರ್ಪಿಯೊ ವಾಹನ, ಒಂದು ಸ್ಕ್ರೂಡ್ರೈವರ್ ಹಾಗೂ ಗ್ಯಾಸ್ ಕಟರ್ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರಕರಣವನ್ನು ಭೇದಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತನಿಖಾ ತಂಡಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.
