ಕರ್ನಾಟಕದ ಸಾಂಸ್ಕೃತಿಕ ಕಂಪು ಮತ್ತು ಮಹಿಳಾ ಸಬಲೀಕರಣದ ಪ್ರತೀಕವಾದ ಭುವನೇಶ್ವರಿ ಉತ್ಸವವು ಈ ಬಾರಿ ಅತ್ಯಂತ ವಿಶೇಷವಾಗಿ ಹಾಗೂ ಅರ್ಥಪೂರ್ಣವಾಗಿ ಸಂಪನ್ನಗೊಂಡಿದೆ. ಕಳೆದ ನಾಲ್ಕೈದು ದಶಕಗಳಿಂದ ಸತತವಾಗಿ ಯಶಸ್ಸಿನ ಹೆಜ್ಜೆ ಇಡುತ್ತಿರುವ ಈ ಸಂಭ್ರಮದಲ್ಲಿ, ಮಹಿಳೆಯರ ಬೌದ್ಧಿಕ, ಕಲಾತ್ಮಕ ಮತ್ತು ಪಾಕಕಲಾ ನೈಪುಣ್ಯವನ್ನು ಹೊರಹಾಕಲು ಹತ್ತು ಹಲವು ವಿನೂತನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.


ಕನ್ನಡ ಮಹಿಳಾ ಸಂಘದ ಮಾರ್ಗದರ್ಶನದಲ್ಲಿ ಹಾಗೂ ಪ್ರಮುಖರಾದ ಶುಭದಾ ಕೋಟೂರಕರ ಮತ್ತು ರಂಜನಾ ನಾಯಕ್ ಅವರ ನೇತೃತ್ವದಲ್ಲಿ ನಡೆದ ಈ ಭುವನೇಶ್ವರಿ ಉತ್ಸವವು ಮಹಿಳಾ ಲೋಕದಲ್ಲಿ ಹೊಸ ಹುರುಪನ್ನು ಮೂಡಿಸಿತು. ಬರೋಬ್ಬರಿ 45 ವರ್ಷಗಳ ಪರಂಪರೆಯನ್ನು ಹೊಂದಿರುವ ಈ ಉತ್ಸವದಲ್ಲಿ ಸ್ಪರ್ಧಿಗಳು ಅಷ್ಟೇ ಉತ್ಸಾಹದಿಂದ ಪಾಲ್ಗೊಂಡು ಕರುನಾಡಿನ ಸಂಸ್ಕೃತಿಗೆ ತಕ್ಕ ಗೌರವವನ್ನು ಸಲ್ಲಿಸಿದರು. ಕನ್ನಡ ಮಹಿಳಾ ಸಂಘದ ವತಿಯಿಂದ ಆಯೋಜನೆಗೊಂಡ ಭುವನೇಶ್ವರಿ ಉತ್ಸವ-2026ರ ಸಮಾರಂಭದಲ್ಲಿ ಸಾರ್ವಜನಿಕ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳು ಗಮನ ಸೆಳೆದವು. ಸಂಘದ ಸಂಸ್ಥಾಪಕರಾದ ರಂಜನಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹೋತ್ಸವದಲ್ಲಿ ರಂಗೋಲಿ, ಅಡುಗೆ, ರಸಪ್ರಶ್ನೆ, ಗಾಯನ ಹಾಗೂ ಗ್ರೈಂಡ್ ಹೌಸಿಂಗ್ ಸ್ಪರ್ಧೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಡಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ನಿಗದಿತ ವೇಳಾಪಟ್ಟಿಯಂತೆ ಜರುಗಿದ ಈ ಕಾರ್ಯಕ್ರಮದಲ್ಲಿ ಕೇವಲ ಎರಡು ಬಣ್ಣಗಳ ಬಳಕೆಯ ಚುಕ್ಕೆ ಮತ್ತು ಗೆರೆಗಳ ರಂಗೋಲಿ ಸ್ಪರ್ಧೆಯು ಒಟ್ಟು 28 ಜನ ಸ್ಪರ್ಧಾಳುಗಳನ್ನು ಆಕರ್ಷಿಸಿದರೆ, ಸ್ವೀಟ್ ಕಾರ್ನ್ ಆಧರಿಸಿದ ಸಿಹಿ ಹಾಗೂ ಖಾರದ ಅಡುಗೆ ಸ್ಪರ್ಧೆಯಲ್ಲಿ ಕ್ರಮವಾಗಿ 18 ಮತ್ತು 12 ಜನ ಮಹಿಳೆಯರು ತಮ್ಮ ಕೈಚಳಕದ ಅಡುಗೆಯ ಕೌಶಲ್ಯವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವರಕವಿ ದ.ರಾ. ಬೆಂದ್ರೆಯವರ ಮಧುರ ಗೀತೆಗಳನ್ನು ಆಧರಿಸಿದ ಸಮೂಹ ಗಾಯನ ಸ್ಪರ್ಧೆಯಲ್ಲಿ 5 ತಂಡಗಳು ಭಾಗವಹಿಸಿ ನಾಡಿನ ಸಾಂಸ್ಕೃತಿಕ ಗತ್ತು ಹಾಗೂ ಭಾವೈಕ್ಯತೆಯನ್ನು ತಮ್ಮ ಸುಶ್ರಾವ್ಯ ಧ್ವನಿಯಲ್ಲಿ ಮೊಳಗಿಸಿದವು. ಇದರೊಂದಿಗೆ ಮಹಿಳೆಯರ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯ ಕುರಿತು ವಿಶೇಷ ರಸಪ್ರಶ್ನೆ ಸ್ಪರ್ಧೆಯನ್ನು ಸಹ ನಡೆಸಲಾಯಿತು. ಉತ್ಸವದ ಸಂಘಟನಾ ಪ್ರಮುಖರಾದ ಶುಭದಾ ಕೋಟರಕರ್ ಅವರು ‘ಇನ್ ನ್ಯೂಸ್’ ಮಾಧ್ಯಮದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾ, ಕಳೆದ 45 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಈ ಉತ್ಸವಕ್ಕೆ ಸ್ಥಳೀಯ ಮಹಿಳೆಯರು ಮತ್ತು ಸಂಘದ ಸದಸ್ಯೆಯರು ನೀಡಿದ ಸಕ್ರಿಯ ಸಹಕಾರವೇ ಈ ಬೃಹತ್ ಯಶಸ್ಸಿಗೆ ಪ್ರಮುಖ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.
