Belagavi

ಬೆಳಗಾವಿ ಭೋಯಿ ಗಲ್ಲಿಯ ‘ವಿಘ್ನರಾಜ’ನ ವೈಭವೋಪೇತ ಆಗಮನ

Share

ಬೆಳಗಾವಿಯ ಭೋಯಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳದ ವತಿಯಿಂದ ಪ್ರತಿಷ್ಠಾಪಿಸಲ್ಪಡುವ ‘ವಿಘ್ನರಾಜ’ ಗಣೇಶನ ಮೂರ್ತಿಯ ಭವ್ಯ ಹಾಗೂ ವಿಶಿಷ್ಟ ಆಗಮನೋತ್ಸವವು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಜರುಗಿತು.

ಈ ಬಾರಿಯ ಉತ್ಸವವು ಮಂಡಳದ 75ನೇ ವರ್ಷದ ಅಮೃತ ಮಹೋತ್ಸವವಾಗಿರುವುದರಿಂದ, ಆಚರಣೆಯಲ್ಲಿ ವಿಶೇಷ ಕಳೆ ಹಾಗೂ ಸಾಂಪ್ರದಾಯಿಕ ಮೆರುಗು ಕಂಡುಬಂದಿತು. ಯಡಿಯೂರಪ್ಪ ರಸ್ತೆಯಿಂದ ಆರಂಭಗೊಂಡು ರಾಣಿ ಚೆನ್ನಮ್ಮ ವೃತ್ತದ ಮೂಲಕ ಸಾಗಿದ ಈ ಮೆರವಣಿಗೆಯು ಭಕ್ತ ಸಮೂಹವನ್ನು ಮಂತ್ರಮುಗ್ಧಗೊಳಿಸಿತು. ಖಡೇಬಜಾರ್ ವೃತ್ತದ ಸಿಪಿಐ ಇನ್ಸ್‌ಪೆಕ್ಟರ್, ಶ್ರೀರಾಮಸೇನಾ ಹಿಂದೂಸ್ಥಾನನ ಸಂಸ್ಥಾಪಕ ರಮಾಕಾಂತ್ ಕೊಂಡುಸ್ಕರ್ ಹಾಗೂ ವಿಕಾಸ್ ಕಲಘಟಗಿ ಸೇರಿದಂತೆ ಗಲ್ಲಿಯ ಗಣ್ಯರು ಈ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿ, ಸಾಂಪ್ರದಾಯಿಕ ಸಂಭ್ರಮಕ್ಕೆ ಸಾಕ್ಷಿಯಾದರು.ಮೆರವಣಿಗೆಯ ಉದ್ದಕ್ಕೂ ಮೊಳಗಿದ ರೋಮಾಂಚಕ ಡೋಲ್-ತಾಶಾ ಪಥಕಗಳ ಸದ್ದು ಇಡೀ ವಾತಾವರಣವನ್ನು ಭಕ್ತಿಭರಿತ ಹಾಗೂ ಉತ್ಸಾಹಭರಿತವನ್ನಾಗಿ ಮಾಡಿತು.

ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಹೆಜ್ಜೆ ಹಾಕಿದ ಗಲ್ಲಿಯ ಯುವಕರು ಮತ್ತು ಹಿರಿಯರ ಉತ್ಸಾಹ ಮುಗಿಲು ಮುಟ್ಟಿತ್ತು. ಇದರೊಂದಿಗೆ ವಿಶೇಷ ಆಕರ್ಷಣೆಯಾಗಿ ಪ್ರದರ್ಶಿಸಲ್ಪಟ್ಟ ತಾತ್ಯಾವಿಂಚೂ ಹಾಗೂ ಗೋರಿಲ್ಲಾ ವೇಷಭೂಷಣಗಳು ರಸ್ತೆಯುದ್ದಕ್ಕೂ ನಿಂತಿದ್ದ ಸಾರ್ವಜನಿಕರನ್ನು ಹಾಗೂ ಪುಟಾಣಿಗಳನ್ನು ರಂಜಿಸಿದವು. ಕಾಲೇಜು ರಸ್ತೆ, ಸಮಾದೇವಿ ಗಲ್ಲಿ ಮತ್ತು ಖಡೇಬಜಾರ್‌ನ ಪ್ರಮುಖ ಮಾರ್ಗಗಳ ಮೂಲಕ ಸಾಗಿದ ಈ ಮೆರವಣಿಗೆಯು ಕಲಾ ಮತ್ತು ಸಂಸ್ಕೃತಿಯ ಅನಾವರಣದಂತಿತ್ತು.

ಮಂಡಳದ ಅಧ್ಯಕ್ಷ ವಿನಾಯಕ್ ಹಲಕರ್ಣಿ ಅವರು ಮಾತನಾಡಿ, ಭೋಯಿ ಗಲ್ಲಿಯ ಗಣಪನನ್ನು ಮೂರ್ತಿಕಾರ ವಿನಾಯಕ ಮನೋಹರ್ ಪಾಟೀಲ್ ಅವರು ಸಿದ್ಧ ಪಡಿಸಿದ್ದು, ಗಣಪತ್ ಗಲ್ಲಿಯು ಅತ್ಯಂತ ಜನನಿಬಿಡ ಮಾರುಕಟ್ಟೆ ಪ್ರದೇಶವಾಗಿರುವುದರಿಂದ ಮತ್ತು ಗಲ್ಲಿಯು ಕಿರಿದಾಗಿರುವುದರಿಂದ ಉತ್ಸವದ ದಿನಗಳಲ್ಲಿ ತೀವ್ರ ಜನದಟ್ಟಣೆ ಹಾಗೂ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಮತ್ತು ಅಂದಕಟ್ಟಿನ ಅಲಂಕಾರಿಕ ಕೆಲಸಗಳಿಗೆ ಹಾಗೂ ಮಂಟಪ ಸಿದ್ಧತೆಗೆ ಸಾಕಷ್ಟು ಅವಕಾಶ ಸಿಗಲೆಂದು ಈ ಬಾರಿ ಐದು-ಆರು ದಿನಗಳ ಮುಂಚಿತವಾಗಿ ಗಣೇಶ ಮೂರ್ತಿಯನ್ನು ಗಲ್ಲಿಗೆ ತರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

1952ರಲ್ಲಿ ಆರಂಭವಾದ ಈ ಪ್ರತಿಷ್ಠಿತ ಗಣೇಶೋತ್ಸವವು ಈಗ 75 ವಸಂತಗಳನ್ನು ಪೂರೈಸಿರುವುದು ಇಡೀ ಬಡಾವಣೆಗೆ ಐತಿಹಾಸಿಕ ಹೆಮ್ಮೆಯ ಕ್ಷಣವಾಗಿದೆ.

Tags:

error: Content is protected !!