ನೂತನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಜನರಿಗೆ ಆರು ಜನಪ್ರಿಯ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಸೆಪ್ಟೆಂಬರ್ 21ರಿಂದ 3 ದಿನ ವಿಶೇಷ ಅಧಿವೇಶನಕ್ಕೆ ತೀರ್ಮಾನಿಸಲಾಗಿದೆ.

ವಿಧಾನಸೌಧದಲ್ಲಿ ನೂತನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಜನರಿಗೆ ಆರು ಜನಪ್ರಿಯ ತೀರ್ಮಾನಗಳನ್ನು ಮಾಡಿದೆ. ತಮ್ಮ ನೂತನ 13 ಸಚಿವ ಸಂಪುಟ ಸದಸ್ಯರ ಜೊತೆ ಮೊದಲ ಸಭೆ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್ ಆರು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ರಾಜ್ಯದ ಯುವ ಜನಾಂಗಕ್ಕೆ, ಬೆಂಗಳೂರಿಗೆ, ಒಸಿ ಸಿಗದ ನಿವೇಶನದಾರರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಾಂಕ್ಷಿಗಳಿಗೆ ಸಂಬಂಧಿಸಿದಂತೆ ಆರು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಖಾಸಗಿ EMPLOYMENT EXCHANGE ಕೇಂದ್ರ ರಚನೆ, 10,000 ಭಾರತ ಜೋಡೋ ಯುವಕರ ಸಂಘ, 2500 ಚದರ್ ಅಡಿ ನಿವೇಶನದಾರರಿಗೆ ಒಸಿಯಿಂದ ವಿನಾಯಿತಿ, ರಾಜ್ಯಾದ್ಯಂತ ಬಿ ನಿಂದ ಎ ಖಾತಾ ಯೋಜನೆ ಮತ್ತು, ಬೆಂಗಳೂರು ರಸ್ತೆ ದುರಸ್ತಿಗೆ 2000 ಕೋಟಿ ರೂ ಬಿಡುಗಡೆ ಕುರಿತು ಮಹತ್ವದ ತಿರ್ಮಾನ ಕೈಗೊಳ್ಳಲಾಯಿತು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಜಿ. ಪರಮೇಶ್ವರ ಅವರು, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ, ಅನೇಕ ಜ್ವಲಂತ ಸಮಸ್ಯೆಗಳಿವೆ. ಹೀಗಿದ್ದರೂ ಸದನದಲ್ಲಿ ಚರ್ಚೆ ಮಾಡೋದಕ್ಕೆ ಅವಕಾಶಗಳು ಸಿಕ್ತಾ ಇಲ್ಲ. ಅದರಲ್ಲೂ ಈ ವರ್ಷ ಭೀಕರವಾದಂತಹ ಬರಗಾಲ ಇದೆ. 150 ವರ್ಷಗಳಲ್ಲಿ ಇಂತಹ ಬರಗಾಲ ಬಂದಿರಲಿಲ್ಲ, ಸೂಪರ್ ಎಲ್ ನಿನೋ ಬಂದಿದೆ. ಇದರ ಇಂಪ್ಯಾಕ್ಟ್ ರೈತನ ಜೀವನಕ್ಕೆ ಆಗೋದರ ಜೊತೆಗೆ ಇಡೀ ರಾಜ್ಯದ ಸಮುದಾಯಕ್ಕೆ ಅದರ ಎಕಾನಮಿ ಇರಬಹುದು, ಜನಗಳ ಆಹಾರ ಇರಬಹುದು, ಇವೆಲ್ಲದಕ್ಕೂ ಎಫೆಕ್ಟ್ ಆಗಿದೆ. ಇದರ ಬಗ್ಗೆ ಸುದೀರ್ಘ ಚರ್ಚೆ ಆಗಬೇಕೆಂದು ವಿಶೇಷ ಅಧಿವೇಶನ ಕರೆಯುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.
ಇದರ ಜೊತೆಗೆ ಕಸ್ತೂರಿ ರಂಗನ್ ವರದಿ ಈಗ ಮತ್ತೆ ಚರ್ಚೆಗೆ ಬಂದಿದೆ. ಈಗಾಗಲೇ ನಾಲ್ಕೈದು ಬಾರಿ ಇದನ್ನ ರಿಜೆಕ್ಟ್ ಮಾಡಿದ್ದೇವೆ. ಆದರೂ ಕೂಡ ಇನ್ನು ಅದರ ಬಗ್ಗೆ ಚರ್ಚೆಗಳು ಬರ್ತಾ ಇದ್ದಾವೆ. ಹೀಗಾಗಿ ಈ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ ಎಂದವರು ತಿಳಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ಹೊಸ ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಹೆಸರು ಮುಂದೆ ಬದಲಾಗಬಹುದು. ಈ ಯೋಜನೆ ಮೂಲಕ NRI ಕಾರ್ಡ್ ವಿತರಣೆ ಮಾಡುವ ಜೊತೆಗೆ ಉದ್ಯೋಗ ಅವಕಾಶ ನೀಡಲು ಈ ಯೋಜನೆ ನೆರವು ನೀಡಲಿದೆ ಎಂದವರು ಹೇಳಿದ್ದಾರೆ.
