Belagavi

ಗಣೇಶೋತ್ಸವದ ಹಿನ್ನೆಲೆ ಮೆರವಣಿಗೆ ಮಾರ್ಗವನ್ನು ಪರಿಶೀಲಿಸಿದ ಮೇಯರ್…

Share

ಮುಂಬರುವ ಗಣೇಶೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ಆಚರಿಸಲು ಬೆಳಗಾವಿ ಮಹಾನಗರ ಪಾಲಿಕೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಮೇಯರ್ ಮತ್ತು ಆಯುಕ್ತರ ನೇತೃತ್ವದಲ್ಲಿ ಪ್ರಮುಖ ಮೆರವಣಿಗೆ ಮಾರ್ಗಗಳ ವೀಕ್ಷಣೆ ನಡೆಸಿ, ಮೂಲಭೂತ ಸೌಕರ್ಯ ಕಲ್ಪಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಮುಂಬರುವ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಪೂರ್ವ ತಯಾರಿಗಳನ್ನು ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಬೆಳಗಾವಿಯ ಸಾರ್ವಜನಿಕ ಶ್ರೀ ಲೋಕಮಾನ್ಯ ಟಿಳಕ ಗಣೇಶೋತ್ಸವ ಮಹಾಮಂಡಳದ ವತಿಯಿಂದ ಮಹಾಪೌರರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರು ಗುರುವಾರ ಬೆಳಿಗ್ಗೆ ನಗರ ಸಂಚಾರ ಮಾಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಇದಕ್ಕೂ ಮೊದಲು ಗಣಪತಿ ಮೂರ್ತಿಗಳನ್ನು ವಿಸರ್ಜಿಸುವ ಕಪಿಲೇಶ್ವರ ಹೊಂಡದ ಆವರಣದಲ್ಲಿ ಮೇಯರ್, ನಗರಸೇವಕರು ಹಾಗೂ ಆಯುಕ್ತರು ಪೂಜೆ ಸಲ್ಲಿಸಿ ಸಿದ್ಧತೆಗಳಿಗೆ ಚಾಲನೆ ನೀಡಿದರು.

ನಂತರ ಗಣೇಶ ಮೂರ್ತಿಗಳು ಸಾಗುವ ಮೆರವಣಿಗೆ ಮಾರ್ಗಗಳಾದ
ರಾಣಿ ಚೆನ್ನಮ್ಮ ವೃತ್ತ ಸಮಾದೇವಿ ಗಲ್ಲಿ, ಮಾರುತಿ ಗಲ್ಲಿ, ಗಣಪತ ಗಲ್ಲಿ, ರಾಮಲಿಂಗ ಖಿಂಡ್ ಗಲ್ಲಿಗಳು, ಧರ್ಮವೀರ ಛತ್ರಪಪತಿ ಸಂಭಾಜೀ ಮಹಾರಾಜ್ ವೃತ್ತ, ಟಿಳಕ ವೃತ್ತ, ಹೇಮು ಕಲಾನಿ ವೃತ್ತ, ಮಾರ್ಕೆಟ್ ಸೇರಿದಂತೆ ಮುಂತಾದ ಮಾರ್ಗಗಳ ಪರಿಶೀಲನೆ ನಡೆಸಿದರು.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಅವರು ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗದ ಪರಿಶೀಲನೆ ವೇಳೆ ಮಾತನಾಡಿ, ಪಾಲಿಕೆ ಆಯುಕ್ತರು, ನೌಕರರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಎಲ್ಲ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮೆರವಣಿಗೆಯ ದಾರಿಯನ್ನು ಪರಿಶೀಲಿಸಲಾಗಿದೆ. ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲಾಗುವುದು. ಅಲ್ಲದೇ, 24×7 ನೀರು ಸರಬರಾಜು ಕೆಲಸ ಹಾಗೂ ಎಲ್‌ ಆಂಡ್ ಟಿ ಡಿ ಕಾಮಗಾರಿಗಳಿಂದ ಆಗಿರುವ ಗುಂಡಿಗಳನ್ನು ಮುಚ್ಚಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಅಲ್ಲದೆ, ಗಣೇಶ ವಿಸರ್ಜನೆಗೆ ಯಾವುದೇ ತೊಂದರೆಯಾಗದಂತೆ ಎಲ್ಲರೂ ಸಮನ್ವಯದಿಂದ ಈ ಕಾರ್ಯವನ್ನು ಯಶಸ್ವಿಗೊಳಿಸೋಣ ಎಂದು ತಿಳಿಸಿದರು.

ಗಣೇಶೋತ್ಸವ ಮೆರವಣಿಗೆ ಮಾರ್ಗದ ಪರಿಶೀಲನೆ ಹಾಗೂ ಸಾರ್ವಜನಿಕ ಸುರಕ್ಷತೆಯ ಮುನ್ನೆಚ್ಚರಿಕೆಗಳ ಕುರಿತು ಮಾತನಾಡಿದ ಕಮಿಷನರ್ ಕಾರ್ತಿಕ್ ಅವರು, ಹಬ್ಬದ ಸಂಭ್ರಮಕ್ಕೆ ಯಾವುದೇ ಧಕ್ಕೆಯಾಗದಂತೆ ಮೆರವಣಿಗೆ ಮಾರ್ಗಗಳಲ್ಲಿನ ರಸ್ತೆ ಗುಂಡಿಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲು ಈಗಾಗಲೇ ಪೊಲೀಸ್, ಹೆಸ್ಕಾಂ ಹಾಗೂ ಮಹಾನಗರ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ, ರಸ್ತೆ ಮಧ್ಯೆ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹ ಅನುಮತಿ ಪಡೆದ ಸ್ಥಳಗಳಲ್ಲಿ ಮಾತ್ರ ಹಬ್ಬವನ್ನು ಆಚರಿಸುವ ಮೂಲಕ ಆಡಳಿತ ಯಂತ್ರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೇಯಸ್ ನಾಕಾಡಿ, ರಾಜು ಭಾತಕಂಡೆ,
ನೀತಿನ್ ಜಾಧವ್, ಗಿರೀಶ ಧೋಂಗಡಿ, ಆನಂದ ಚವ್ಹಾಣ್ಣ್, ರೇಷ್ಮಾ ಕಾಮಕರ, ವೈಶಾಲಿ ಭಾತ ಕಂಡೆ ಸೇರಿದಂತೆ ಇತರೇ
ನಗರ ಸೇವಕರು, ಅಭಿವೃದ್ಧಿ ವಿಭಾಗದ ಉಪ ಆಯುಕ್ತೆ ಲಕ್ಷ್ಮೀ ಸುಳಗೇಕರ್ ಸೇರಿದಂತೆ ಪಾಲಿಕೆಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!