Belagavi

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಡಿಬೇಟ್ ಯೂನಿಯನ್ ಇರಬೇಕು: ಎಸ್. ಎಂ. ಜಾಮದಾರ

Share

ಪ್ರತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಡಿಬೇಟ್ ಯೂನಿಯನ್ ಇರಬೇಕು. ಇಂತಹ ಚರ್ಚಾ ಸಂಘಗಳಲ್ಲಿ ನಡೆಯುವ ಚರ್ಚೆ, ಸಂವಾದ, ಓದು ಮತ್ತು ಅಧ್ಯಯನಗಳು ವಿದ್ಯಾರ್ಥಿಗಳಲ್ಲಿ ವಿಚಾರಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯ ಹಾಗೂ ವಿಶ್ಲೇಷಣಾ ಮನೋಭಾವ, ನಾಯಕತ್ವದ ಗುಣ ಬೆಳೆಸುವುದರ ಜೊತೆಗೆ ಅವರ ಬಹುಮುಖ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿಯಾಗುತ್ತವೆ ಎಂದು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಎಸ್. ಎಂ. ಜಾಮದಾರ ಅಭಿಪ್ರಾಯಪಟ್ಟರು.

ಬೆಳಗಾವಿ: ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ 2026-27ನೇ ಸಾಲಿನ ಸಾಂಸ್ಕೃತಿಕ, ಎನ್. ಎಸ್. ಎಸ್., ಎನ್.ಸಿ.ಸಿ,. ರೆಡ್ ಕ್ರಾಸ್, ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಕಾಲೇಜುಗಳಲ್ಲಿ ನೂರರಲ್ಲಿ 20ರಷ್ಟು ಮಾತ್ರ ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಇಂದು ಶೇ. 80ರಷ್ಟು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವುದು ಶಿಕ್ಷಣ ಕ್ಷೇತ್ರದಲ್ಲಿ ಸಂಭವಿಸಿರುವ ಬಹುದೊಡ್ಡ ಬದಲಾವಣೆಯಾಗಿದೆ ಎಂದು ಅವರು ಹೇಳಿದರು. ತಂತ್ರಜ್ಞಾನವು ಪ್ರತಿ ಮೂರು ತಿಂಗಳಿಗೊಮ್ಮೆ ಹೊಸ ಬದಲಾವಣೆಗಳತ್ತ ಸಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಾ, ಹೊಸ ವಿಚಾರಗಳ ಬೆನ್ನತ್ತಿ ಸಾಗಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ನೋಟ್ಸ್‌ಗಳನ್ನು ಬರೆಸುವ ಮತ್ತು ನೀಡುವ ಪದ್ಧತಿ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂತಹ ಪದ್ಧತಿ ಇಲ್ಲ. ಈ ರೀತಿಯ ಕಲಿಕಾ ಪದ್ಧತಿ ವಿದ್ಯಾರ್ಥಿಗಳ ಸೃಜನಶೀಲತೆಯ ಮೇಲೆ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ತಾವು ಕಲಿಯುವ ವಿಷಯದ ಆಳ ಮತ್ತು ಅಗಲವನ್ನು ಅರಿಯಲು ಸ್ವತಃ ಅಧ್ಯಯನ ಮಾಡಬೇಕು. ಅಧ್ಯಯನದ ಸಂದರ್ಭದಲ್ಲಿ ಅವರಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಶಿಕ್ಷಕರು ಉತ್ತರಿಸುವ ಮೂಲಕ ಮಾರ್ಗದರ್ಶನ ನೀಡಬೇಕು. ಇದರಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಬೌದ್ಧಿಕ ಬೆಳವಣಿಗೆ ಮತ್ತಷ್ಟು ವೃದ್ಧಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಕಾಲೀನ ಉದ್ಯೋಗ ಮಾರುಕಟ್ಟೆಯಲ್ಲಿ ಸಾಫ್ಟ್ ಸ್ಕಿಲ್ ಗೆ ಹೆಚ್ಚಿನ ಬೇಡಿಕೆಯಿದೆ. ನಮ್ಮಲ್ಲಿ ಜ್ಞಾನವಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ವಿಧಾನ ತಿಳಿದಿರದಿದ್ದರೆ ನಮ್ಮಲ್ಲಿರುವ ಜ್ಞಾನಕ್ಕೆ ಬೆಲೆಯಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅಂಕಗಳಿಗಿಂತಲೂ ಜ್ಞಾನ ಮತ್ತು ಕೌಶಲ್ಯಗಳು ಮುಖ್ಯ ಎಂಬುದನ್ನು ಅರಿತುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ತಂದೆ-ತಾಯಿ ನಮಗೆ ಉಸಿರು ನೀಡಿದ ದೇವತೆಗಳು. ಹಾಗೆಯೇ ತಾಯ್ನಾಡಿನ ಋಣವೂ ನಮ್ಮ ಮೇಲಿದೆ. ಇವರೆಲ್ಲರ ಋಣವನ್ನು ತೀರಿಸಬೇಕಾದರೆ ಜ್ಞಾನದ ಸಾಕ್ಷಾತ್ಕಾರ ಹೊಂದಬೇಕು.

ಪ್ರಸ್ತುತ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಗಮನಿಸಿದರೆ, ಮುಂದಿನ ಇಪ್ಪತ್ತು ವರ್ಷಗಳಲ್ಲಿ ಅದು ಮನುಷ್ಯನನ್ನು ಆಳಲಿದೆ. ಆದ್ದರಿಂದ ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದರ ಜೊತೆಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಜೀವನವನ್ನು ಹೇಗೆ ಆರಂಭಿಸಿದೆವು ಎನ್ನುವುದಕ್ಕಿಂತ, ಅದನ್ನು ಹೇಗೆ ಯಶಸ್ವಿಯಾಗಿ ದಡಮುಟ್ಟಿಸಿದ್ದೇವೆ ಎಂಬುದು ಮುಖ್ಯ. ಶಿಕ್ಷಕರ ಪಾಠ ಬೋಧಿನೆ ಕಾಟಾಚಾರದ ಕೆಲಸವಲ್ಲ; ಅದೊಂದು ಸತ್ಕಾರ್ಯ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ.

ಪದವಿ ಪ್ರಮಾಣಪತ್ರ ಪಡೆಯುವುದಕ್ಕಿಂತ ಜ್ಞಾನ ಸಂಪಾದಿಸುವುದು ಅತ್ಯಂತ ಮುಖ್ಯ. ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರದ ಜೊತೆಗೆ ಉದ್ಯೋಗದ ಪತ್ರವನ್ನೂ ಮನೆಗೆ ತೆಗೆದುಕೊಂಡು ಹೋಗುವಂತಾಗಬೇಕು. ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ಭಾಷಾ ಸಾಮರ್ಥ್ಯ, ಜ್ಞಾನ, ಕೌಶಲ್ಯ ಹಾಗೂ ಆತ್ಮವಿಶ್ವಾಸ ಗಟ್ಟಿಯಾಗಬೇಕು ಎಂದು ಅವರು ಹೇಳಿದರು.

ಜೀವನದಲ್ಲಿ ದೃಷ್ಟಿಕೋನ ಉತ್ತಮವಾಗಿದ್ದರೆ, ನಮ್ಮ ಸೃಷ್ಟಿಯೂ ಉತ್ತಮವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿಶಾಲವಾದ ದೃಷ್ಟಿಕೋನವನ್ನು ಬೆಳೆಸಿಕೊಂಡು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.

ಈ ಶೈಕ್ಷಣಿಕ ಸಾಲಿನಲ್ಲಿ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ 70 ವಿದ್ಯಾರ್ಥಿಗಳನ್ನು ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಪ್ರವೇಶಾತಿ ನೀಡಲಾಗಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ದೊರೆತಿರುವ ಉತ್ತಮ ಮಾನ್ಯತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ಅವರು ಮಾತನಾಡಿ, ಜೀವನದಲ್ಲಿ ಲವಲವಿಕೆಯಿಂದಿದ್ದು, ಸದಾ ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು. ಇಚ್ಛಾಶಕ್ತಿ ಇದ್ದಾಗ ಮಾತ್ರ ಸಾಧಕರಾಗಲು ಸಾಧ್ಯ. ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗಾಗಿ ಇ-ವಿದ್ಯಾದಂಥ ವಿದ್ಯುನ್ಮಾನ ವೇದಿಕೆಯನ್ನು ಪರಿಚಯಿಸಿದ್ದು, ನಾಡಿನ ಪ್ರಖ್ಯಾತ ವಿದ್ವಾಂಸರ ಜ್ಞಾನವನ್ನು ಇದರ ಮೂಲಕ ಕೊಡುತ್ತಿದ್ದೇವೆ, ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸರ್ಕಾರ ಪ್ರಸ್ತುತ ಸಾವಿರಾರು ಹುದ್ದೆಗಳ ನೇಮಕಾತಿ ನಡೆಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯವು ಈ ವರ್ಷ ‘ಇ-ಸ್ಪರ್ಧಾ’ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ. ಜೊತೆಗೆ ಆರ್‌ಸಿಯು ಫೆಸ್ಮಾ ಹೆಸರಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಅಗತ್ಯವಿರುವ ತರಬೇತಿಯನ್ನು ಸಹ ನೀಡಲಾಗುತ್ತಿದೆ.

ನಿಮ್ಮ ದೇಹ, ಮನಸ್ಸು ಮತ್ತು ಅಭಿರುಚಿ ಒಂದಾದಾಗ ಮಾತ್ರ ನೀವು ಸಾಧಕರಾಗಿ ಹೊರಹೊಮ್ಮಲು ಸಾಧ್ಯ. ಆಗ ನೀವು ಕಲಿತ ಕಾಲೇಜು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಸಂತೋಷ ಕಾಮಗೌಡ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ಎಸ್ ಸಿ ಪಾಟೀಲ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಪ್ರಾಚಾರ್ಯ ಪ್ರೊ. ಅರ್ಜುನ ಜಂಬಗಿ ವಂದಿಸಿದರು, ಡಾ. ನಮಿತಾ ಪೋತರಾಜ ಪರಿಚಯಿಸಿದರು. ಡಾ. ದೀಪಾ ಅಂಟಿನಿ ನಿರೂಪಿಸಿದರು, ವಿದ್ಯಾರ್ಥಿನಿ ಋತುಜಾ ಕಾಕತಿಕರ ನೃತ್ಯದ ಮೂಲಕ ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆಕಾಶ ತೋಳಿ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿ ಹರ್ಷಿತಾ ಮರಳಿ ಮತ್ತು ಸಾಂಸ್ಕೃತಿಕ ಸಂಯೋಜಕ ಡಾ. ಮೊಯ್ದಿನ್ ಮುತುವಲಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!