ವಿದ್ಯಾಭಾರತಿ ಕರ್ನಾಟಕದ ವತಿಯಿಂದ ಬೆಳಗಾವಿಯಲ್ಲಿ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ವಿವಿಧ ವಿಭಾಗಗಳಲ್ಲಿ ಬೆಳಗಾವಿ, ಬೆಂಗಳೂರು ಹಾಗೂ ಮೈಸೂರು ತಂಡಗಳು ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿವೆ. ಅನಗೋಳದ ಸಂತ ಮೀರಾ ಶಾಲಾ ಮೈದಾನದಲ್ಲಿ ನಡೆದ ಈ ರೋಮಾಂಚಕಾರಿ ಕ್ರೀಡಾಕೂಟದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪ್ರತಿಭಾನ್ವಿತ ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಆಟದ ಪ್ರದರ್ಶನ ನೀಡಿ ಗಮನ ಸೆಳೆದರು.

ಬೆಳಗಾವಿಯ ಅನಗೋಳದ ಜನಕಲ್ಯಾಣ ಟ್ರಸ್ಟ್ ಸಂಚಾಲಿತ ಸಂತ ಮೀರಾ ಇಂಗ್ಲಿಷ್ ಮಾಧ್ಯಮ ಶಾಲೆಯ ಮೈದಾನದಲ್ಲಿ ಜರುಗಿದ ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ ಆತಿಥೇಯ ಬೆಳಗಾವಿ, ಬೆಂಗಳೂರಿನ ಆರ್.ವಿ.ಕೆ ಹಾಗೂ ಮೈಸೂರಿನ ಶಾಸ್ತ್ರಿ ಪಿಯು ಕಾಲೇಜು ತಂಡಗಳು ಪ್ರಶಸ್ತಿಗಳನ್ನು ಬಾಚಿಕೊಂಡವು. 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆರ್.ವಿ.ಕೆ ಬೆಂಗಳೂರು ತಂಡವು ಸಂತ ಮೀರಾ ಬೆಳಗಾವಿ ತಂಡವನ್ನು ಮಣಿಸಿದರೆ, ಬಾಲಕಿಯರ ವಿಭಾಗದಲ್ಲಿ ಸಂತ ಮೀರಾ ಬೆಳಗಾವಿ ತಂಡವು ಬೆಂಗಳೂರು ಹಾಗೂ ಬಳ್ಳಾರಿ ತಂಡಗಳ ವಿರುದ್ಧ ಪ್ರಾಬಲ್ಯ ಸಾಧಿಸಿ ವಿಜೇತ It’s ಆಗಿ ಹೊರಹೊಮ್ಮಿತು.
17 ಹಾಗೂ 19 ವರ್ಷದೊಳಗಿನ ವಿವಿಧ ವಿಭಾಗಗಳ ರೋಮಾಂಚಕಾರಿ ಅಂತಿಮ ಪಂದ್ಯಗಳಲ್ಲಿಯೂ ಭರಾಟೆ ಮುಂದುವರಿದಿದ್ದು, ಸಂತ ಮೀರಾ ಬೆಳಗಾವಿ ಮತ್ತು ಮೈಸೂರಿನ ಶಾಸ್ತ್ರಿ ಪದವಿಪೂರ್ವ ಕಾಲೇಜು ಗ್ರಾಮೀಣ ತಂಡಗಳು ಅತ್ಯುತ್ತಮ ಪಟ್ಟುಗಳನ್ನು ಪ್ರದರ್ಶಿಸಿ ಎದುರಾಳಿಗಳನ್ನು ಮಣಿಸಿದವು. ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಜನಕಲ್ಯಾಣ ಟ್ರಸ್ಟ್‌ನ ಪ್ರಮುಖರು, ವಿದ್ಯಾಭಾರತಿ ಪದಾಧಿಕಾರಿಗಳು ಹಾಗೂ ಶಾಲೆಯ ಗಣ್ಯರು ವಿಜೇತ ಮತ್ತು ಉಪವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಅಭಿನಂದಿಸಿದರು. ಪಂದ್ಯಾವಳಿಯ ಯಶಸ್ಸಿಗೆ ಹಲವು ನಿರ್ಣಾಯಕರು ಹಾಗೂ ಶಿಕ್ಷಕ ವೃಂದದವರು ಶ್ರಮಿಸಿದರು.
