ಬೆಳಗಾವಿ ಜಿಲ್ಲೆಯಲ್ಲಿ ಮಳೆ ಇಲ್ಲದೆ ಅನ್ನದಾತ ಕಂಗಾಲಾಗಿದ್ದು, ಬೆಳೆ ನಷ್ಟದ ಭೀತಿ ಎದುರಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ಮಹತ್ವದ ನಡೆಸಿ, ಬರ ಪರಿಹಾರ ಹಾಗೂ ವಿಮೆ ವಿತರಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ

ಇಂದು ಬೆಳಗಾವಿಯ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಸಭಾಗೃಹದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಕೊರತೆ ಹಾಗೂ ಬೆಳೆ ನಷ್ಟದ ಕುರಿತಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಂಜಯ್ ಶೆಟ್ಟೆನ್ನವರ ಅವರು ಎಸ್.ಐ.ಆರ್ ಮತ್ತು ಬರದ ಕುರಿತು ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ. ಜಿಲ್ಲೆಯಲ್ಲಿ ತಲೆದೋರಿರುವ ಹವಾಮಾನ ವೈಪರೀತ್ಯ ಹಾಗೂ ಕೃಷಿ ವಲಯದ ಸಂಕಷ್ಟದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದ್ದು, ರೈತರ ನೆರವಿಗೆ ಧಾವಿಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ.
ಮಳೆಯಿಲ್ಲದೆ ಕಂಗೆಟ್ಟಿರುವ ರೈತರಿಗೆ ನೆರವಾಗಲು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮಿಡ್-ಸೀಸನ್ ಅಡ್ವರ್ಸಿಟಿ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸುಮಾರು ಇಪ್ಪತೊಂಬತ್ತು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಹೆಸರುಕಾಳು ಹಾಗೂ ಉದ್ದು ಬೆಳೆಗಳಿಗೆ ವಿಮೆ ಪರಿಹಾರವಾಗಿ ಅಂದಾಜು ಹನ್ನೊಂದು ಕೋಟಿ ರೂಪಾಯಿಗಳು ರೈತರ ಖಾತೆಗೆ ಬರಲಿದ್ದು, ಇದರಿಂದ ಸಂಕಷ್ಟದಲ್ಲಿದ್ದ ರೈತರಿಗೆ ತುಸು ನೆಮ್ಮದಿ ಸಿಗಲಿದೆ.
ಜಿಲ್ಲೆಯ ಹದಿನೈದು ತಾಲೂಕುಗಳ ಪೈಕಿ ಹದಿಮೂರು ತಾಲೂಕುಗಳಲ್ಲಿ ಆಗಸ್ಟ್ ತಿಂಗಳಲ್ಲಿ ತೀವ್ರ ಮಳೆ ಕೊರತೆ ಕಂಡುಬಂದಿದೆ. ಸತತ ಮೂರು ವಾರಗಳ ಕಾಲ ಮಳೆಯಾಗದಿದ್ದರೆ ಬರಪೀಡಿತ ತಾಲೂಕುಗಳೆಂದು ಘೋಷಿಸುವ ನಿಯಮವಿದ್ದು, ಸೂರ್ಯಕಾಂತಿ ಮತ್ತು ಗೋವಿನ ಜೋಳದಲ್ಲಿ ಶೇಕಡಾ ಐವತ್ತಕ್ಕಿಂತ ಹೆಚ್ಚು ಹಾನಿಯಾದ ಕಡೆಗಳಲ್ಲೂ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಅದರಂತೆ ನೇಪಾಳ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣೆ ಉನ್ನತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಬೈಟ್
