ಬೆಳಗಾವಿ ಜಿಲ್ಲೆಯ ಹಲಗಾ ಬ್ರಿಡ್ಜ್ ಮೇಲೆ ಕಳೆದ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ದೃಶ್ಯಗಳು ವಾಹನ ಸವಾರರಲ್ಲಿ ಆತಂಕ ಮೂಡಿಸಿದ್ದವು. ಮೇವು ತುಂಬಿದ್ದ ವಾಹನ ಪಲ್ಟಿಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ.

ದಾವಣಗೆರೆಯಿಂದ ನಸಲಾಪುರಕ್ಕೆ ಜಾನುವಾರುಗಳ ಮೇವಿನ ಪುಡಿ ಸಾಗಿಸುತ್ತಿದ್ದ ಅಶೋಕ್ ಲೇಲ್ಯಾಂಡ್ ಬಡಾ ದೋಸ್ತ್ ವಾಹನವು ಗುರುವಾರ ರಾತ್ರಿ ಹಲಗಾ ಬ್ರಿಡ್ಜ್ ಮೇಲೆ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಚಾಲಕ ಹಾಗೂ ನಿರ್ವಾಹಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ವಾಹನದಲ್ಲಿದ್ದ ಮೇವಿನ ಗೋಣಿಚೀಲಗಳು ಹೆದ್ದಾರಿಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ವಿಧಾನಸೌಧದ ಕಡೆಯಿಂದ ಬೆಳಗಾವಿಯೆಡೆಗೆ ತೆರಳುವ ವಾಹನಗಳನ್ನು ಹಿರೇಬಾಗೇವಾಡಿ ಪೊಲೀಸರು ಮತ್ತು ಮಹಾಮಾರ್ಗ ಪ್ರಾಧಿಕಾರದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ಸರ್ವಿಸ್ ರೋಡ್ ಮೂಲಕ ತಿರುಗಿಸಿ ಸಂಚಾರವನ್ನು ಸುಗಮಗೊಳಿಸಿದರು. ಸ್ಥಳಕ್ಕೆ ಕ್ರೇನ್ ತರಿಸಿ ಪಲ್ಟಿಯಾದ ವಾಹನವನ್ನು ಪಕ್ಕಕ್ಕೆ ಸರಿಸಲಾಗಿದ್ದು, ಚೆಲ್ಲಿದ್ದ ಗೋಣಿಚೀಲಗಳನ್ನು ತೆರವುಗೊಳಿಸುವ ಮೂಲಕ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಮರುಸ್ಥಾಪಿಸಲಾಗಿದೆ.
