ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಅನುದಾನ ರಹಿತ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಬೃಹತ್ ಸಭೆ ಯಶಸ್ವಿಯಾಗಿ ಜರುಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಎಂಎಲ್‌ಸಿಗಳಾದ ಎಸ್‌ವಿ ಸಂಕನೂರ ಹಾಗೂ ಹಣಮಂತ ನಿರಾಣಿ ನೌಕರರ ನ್ಯಾಯಯುತ ಹೋರಾಟಕ್ಕೆ ಬೆಂಬಲ ಸೂಚಿಸಿ, ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವ ಭರವಸೆ ನೀಡಿದ್ದಾರೆ.

ಬೆಳಗಾವಿಯ ಡಿಎಂಎಸ್ ಮಂಡಲದ ಜ್ಯೋತಿ ಕಾಲೇಜಿನಲ್ಲಿ ನಿನ್ನೆ ಅನುದಾನ ರಹಿತ ಶಾಲಾ-ಕಾಲೇಜುಗಳ ನೌಕರರ ಹಾಗೂ ಅನುದಾನಿತ ಶಾಲೆಗಳ ವಿವಿಧ ಸಮಸ್ಯೆಗಳ ಕುರಿತು ಪ್ರಮುಖ ಸಭೆ ನಡೆಯಿತು. ಬೆಳಗಾವಿ, ಖಾನಾಪುರ, ನಿಪ್ಪಾಣಿ, ರಾಯಭಾಗ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ನೌಕರರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್‌ವಿ ಸಂಕನೂರ, ಈ ವರ್ಷವೇ ಅನುದಾನ ಕೊಡಿಸಲು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುವುದಾಗಿ ತಿಳಿಸಿದರು. ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಪೂರ್ಣ ಸರಳೀಕರಣಗೊಳಿಸಿ ವರದಿ ಸಲ್ಲಿಸಲಾಗುವುದು ಹಾಗೂ ಒಂದು ವಾರದೊಳಗೆ ಸಮಸ್ಯೆ ಪರಿಹರಿಸಲಾಗುವುದು ಎಂದರು. ಅಲ್ಲದೆ, ಖಾಲಿ ಹುದ್ದೆಗಳ ಭರ್ತಿಗೆ 15 ದಿನಗಳಲ್ಲಿ ಪರವಾನಗಿ ಕೊಡಿಸಲು ಶ್ರಮಿಸುವುದಾಗಿ ಮತ್ತು ಪರೀಕ್ಷಾ ಗೊಂದಲಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದರು. ಕಳೆದ 12 ವರ್ಷಗಳಿಂದ ಶಾಸಕನಾಗಿ ನಿರಂತರ ಹೋರಾಟ ನಡೆಸಿ ನ್ಯಾಯ ಒದಗಿಸುತ್ತಿದ್ದೇನೆ ಎಂದು ಅವರು ಸ್ಮರಿಸಿದರು.
ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ನೌಕರರ ಪ್ರತಿಯೊಂದು ಹೋರಾಟಕ್ಕೂ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಹುದ್ದೆಗಳ ನವೀಕರಣ, ಅನುದಾನ ಬಿಡುಗಡೆ ಹಾಗೂ 2014ಕ್ಕಿಂತ ಮುಂಚಿತವಾಗಿ ನೇಮಕಗೊಂಡ ನೌಕರರಿಗೆ ನಿವೃತ್ತಿ ವೇತನ ಕೊಡಿಸುವ ಪ್ರಕ್ರಿಯೆಗಳು ತರಿತವಾಗಿ ನಡೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಿಎಂಎಸ್ ಕಾರ್ಯದರ್ಶಿ ಹಾಗೂ ಉಪಮೇಯರ್ ಶ್ರೀ ವಿಕ್ರಮ್ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಎಸ್‌ಸಿ ಅಧ್ಯಕ್ಷ ಶ್ರೀ ಮಠದ ಸಭೆಯನ್ನು ಆಯೋಜಿಸಿದ್ದರು. ಕೋಮಲ್ ಸ್ವಾಗತಿಸಿ, ಅಜಿತ್ ನಾಕಡೆ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘ ಹಾಗೂ ಕೆಎಸ್‌ಎಸ್‌ಸಿ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದು, ಎಂಎಲ್‌ಸಿಗಳಿಬ್ಬರನ್ನು ಸನ್ಮಾನಿಸಲಾಯಿತು.
