ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ತೀವ್ರಗೊಂಡಿದ್ದು, ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಸರ್ಕಾರದ ಮಟ್ಟದಲ್ಲಿ ಕಸರತ್ತು ನಡೆದಿದೆ. ಪ್ರಾದೇಶಿಕ ಆಯುಕ್ತರು ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಇದೀಗ ಮೇಯರ್ ಪ್ರೀತಿ ಕಾಮಕರ್ ಅವರು ಈ ನಡೆಯನ್ನು ತೀವ್ರವಾಗಿ ವಿರೋಧಿಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಮಹಾನಗರ ಪಾಲಿಕೆಯ ನೈಜ ಸ್ಥಿತಿಗತಿ ಮತ್ತು ಕನ್ನಡ ನಾಡು-ನುಡಿಯ ಬದ್ಧತೆಯ ಬಗ್ಗೆ ಸ್ಪಷ್ಟನೆ ನೀಡಿರುವ ಮೇಯರ್, ಪಾಲಿಕೆ ರದ್ದುಗೊಳಿಸುವ ಪ್ರಸ್ತಾವನೆಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಸಂಬಂಧ ಪ್ರಾದೇಶಿಕ ಆಯುಕ್ತರು ನೀಡಿರುವ ಪ್ರಸ್ತಾವನೆಗೆ ಬೆಳಗಾವಿ ಮೇಯರ್ ಶ್ರೀಮತಿ ಪ್ರೀತಿ ವಿನಾಯಕ ಕಾಮಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡ ಪರ ಸಂಘಟನೆಗಳ ಕ್ರಿಯಾ ಸಮಿತಿ ನೀಡಿದ ಮನವಿಯಂತೆ ಮತ್ತು ಗಡಿ ವಿವಾದವು ಸರ್ವೋಚ್ಛ ನ್ಯಾಯಾಲಯದಲ್ಲಿರುವುದರಿಂದ, ಪಾಲಿಕೆಯು ಕನ್ನಡ ನಾಡು-ನುಡಿಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಸಲ್ಲಿರುವ ದಾವೆಗೆ ಪ್ರತಿಯಾಗಿ, ಕರ್ನಾಟಕದ ಗಡಿ ಭಾಗದ ಹಿತರಕ್ಷಣೆಗೆ ಸರ್ಕಾರದಿಂದ ಕಾನೂನು ಅಭಿಪ್ರಾಯ ಪಡೆಯಲು ಪರಿಷತ್ ಸಭೆಯಲ್ಲಿ ತಿದ್ದುಪಡಿ ನಿರ್ಣಯ ಕೈಗೊಳ್ಳಲಾಗಿತ್ತು. ಹೀಗಿದ್ದರೂ, ಆಡಳಿತಾತ್ಮಕ ಬಿಕ್ಕಟ್ಟು ಎಂಬ ನೆಪವೊಡ್ಡಿ ಪಾಲಿಕೆಯನ್ನು ರದ್ದುಗೊಳಿಸಲು ಹೊರಟಿರುವುದು ಖಂಡನೀಯ ಎಂದು ಮೇಯರ್ ಪ್ರೀತಿ ಕಾಮಕರ್ ಹೇಳಿದರು. ಬೈಟ್
ಇನ್ನು ಪಾಲಿಕೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತೀವ್ರ ಅಭಾವವಿದ್ದರೂ ಕಳೆದ ೫ ತಿಂಗಳಲ್ಲಿ ೧೮ ಪ್ರಮುಖ ಸ್ಥಾಯಿ ಸಮಿತಿ ಸಭೆಗಳನ್ನು ನಡೆಸಿ ಸಾರ್ವಜನಿಕ ಹಿತದೃಷ್ಟಿಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಸಿಬ್ಬಂದಿಗಳ ಕೊರತೆ ಹಾಗೂ ಜನಗಣತಿ, ಜಾತಿ ಪ್ರಮಾಣಪತ್ರ ವಿತರಣೆಯಂತಹ ಹೆಚ್ಚುವರಿ ಕೆಲಸಗಳಿಂದಾಗಿ ಅಧಿಕಾರಿಗಳು ಸಭೆಗಳಿಗೆ ಗೈರುಹಾಜರಾಗುತ್ತಿದ್ದು, ಅವರ ಮೇಲೆಯೇ ಶಿಸ್ತುಕ್ರಮ ಜರುಗಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಲಾಗಿದೆ. ಪಾಲಿಕೆಯ ಸ್ವಂತ ಪ್ರಯತ್ನದಿಂದ ೧೫ನೇ ಹಣಕಾಸು ಯೋಜನೆಯಡಿ ಅನುದಾನವನ್ನು ೧೮ ಕೋಟಿಯಿಂದ ೩೪ ಕೋಟಿಗೆ ಹೆಚ್ಚಿಸಿಕೊಂಡಿದ್ದು, ಸಾರ್ವಜನಿಕ ಸೇವೆಯಲ್ಲಿ ಯಾವುದೇ ಲೋಪವಾಗಿಲ್ಲ. ಹೀಗಾಗಿ ಸರ್ಕಾರ ಮತ್ತು ಅಧಿಕಾರಿಗಳು ಪಾಲಿಕೆಗೆ ಅಗತ್ಯ ಸಿಬ್ಬಂದಿ ಹಾಗೂ ಅನುದಾನ ನೀಡಿ ಸಹಕರಿಸಬೇಕೇ ವಿನಃ ಸೂಪರ್ ಸೀಡ್ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಉಪಮೇಯರ್ ಹನುಮಂತ್ ಕೊಂಗಾಲಿ ಒತ್ತಾಯಿಸಿದ್ದಾರೆ.
