ಕಾಲು ಜಾರಿ ಇಬ್ಬರು ಹೆಣ್ಣು ಮಕ್ಕಳು ತೆರೆದ ಬಾವಿಗೆ ಬಿದ್ದಿದ್ದು, ಮಕ್ಕಳನ್ನು ರಕ್ಷಿಸಲು ಬಾವಿಗೆ ಜಿಗಿದ ತಂದೆಯೂ ನಾಪತ್ತೆಯಾಗಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಬಳಬಟ್ಟಿ ಗ್ರಾಮದ ತೋಟದ ಮನೆಯ ಬಳಿ ಇದ್ದ ತೆರೆದ ಬಾವಿಯಲ್ಲಿ ಸಾಕ್ಷಿ (15) ಹಾಗೂ ರಕ್ಷಿತಾ (10) ಎಂಬ ಇಬ್ಬರು ಬಾಲಕಿಯರು ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

ಮಕ್ಕಳು ಬಾವಿಗೆ ಬಿದ್ದಿರುವುದನ್ನು ಗಮನಿಸಿದ ತಂದೆ ಸಾಬಣ್ಣ (40), ಮಕ್ಕಳನ್ನು ಬದುಕಿಸಲು ತಕ್ಷಣವೇ ಬಾವಿಗೆ ಜಿಗಿದಿದ್ದಾರೆ. ಆದರೆ ಸಾಬಣ್ಣ ಅವರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದ್ದು, ಇದೀಗ ತಂದೆ ಹಾಗೂ ಇಬ್ಬರು ಮಕ್ಕಳು ಸೇರಿ ಮೂವರೂ ನಾಪತ್ತೆಯಾಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಿಡಗುಂದಿ ಪೊಲೀಸರು ದೌಡಾಯಿಸಿದ್ದು, ಗ್ರಾಮಸ್ಥರ ಸಹಕಾರದೊಂದಿಗೆ ಮೂವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.
ಬಾವಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ತೆಪ್ಪದ ಮೂಲಕ ಶೋಧ ಕಾರ್ಯ ಮುಂದುವರಿದಿದೆ. ಮೂವರ ಪತ್ತೆಗಾಗಿ ಗ್ರಾಮಸ್ಥರು ಹಾಗೂ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಯಿಂದ ಬಳಬಟ್ಟಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಾಪತ್ತೆಯಾಗಿರುವ ಮೂವರಿಗಾಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕದಿಂದ ಕಾಯುತ್ತಿದ್ದಾರೆ.
