ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಿದ ಸ್ಥಳಕ್ಕೆ ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಣ ನಡೆಸಿದ ಬಿಜೆಪಿ ಮತ್ತು ಸಂಘ ಪರಿವಾರದ ಕೃತ್ಯವನ್ನು ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಭವನದಿಂದ ಆರ್.ಟಿ.ಓ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಮಾತನಾಡಿ, “ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ ನಂತರ ಸ್ಥಳ ಕಲುಷಿತಗೊಂಡಿದೆ ಎಂದು ಗಂಗಾಜಲದಿಂದ ಶುದ್ಧೀಕರಣ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಶೋಷಣೆ ಮತ್ತು ದಬ್ಬಾಳಿಕೆ ವಿರುದ್ಧ ಹೋರಾಡಿ ಉನ್ನತ ಮಟ್ಟಕ್ಕೇರಿದ ಖರ್ಗೆಯವರಿಗೆ ನಡೆದ ಈ ಅಪಮಾನ ಅಕ್ಷಮ್ಯ. ಈ ಹೇಯ ಕೃತ್ಯ ಎಸಗಿದ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ತಕ್ಷಣವೇ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ರಾಜಾ ಸಲೀಂ ಕಾಶಮನವರ್ ಮಾತನಾಡಿ, “ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಹಾಗೂ ಸರ್ವ ಸಮಾಜಗಳ ಮಹೋನ್ನತ ನಾಯಕರಾಗಿದ್ದಾರೆ. ಅವರು ಭಾಗವಹಿಸಿದ್ದ ಕಾರ್ಯಕ್ರಮದ ಬಳಿಕ ಬಿಜೆಪಿ ಹಾಗೂ ಸಂಘ ಪರಿವಾರದವರು ಗಂಗಾಜಲ ಪ್ರೋಕ್ಷಿಸಿ ಹವನ ನಡೆಸುವ ಮೂಲಕ ಅಸ್ಪೃಶ್ಯತೆ ಮೆರೆದಿದ್ದಾರೆ. ಬಿಜೆಪಿಯವರು ಈ ದಲಿತ ವಿರೋಧಿ ಧೋರಣೆಯನ್ನು ಬಹಿರಂಗವಾಗಿ ಒಪ್ಪಿಕೊಳ್ಳಬೇಕು, ಇಲ್ಲವಾದರೆ ಮುಂಬರುವ ದಿನಗಳಲ್ಲಿ ಬಿಜೆಪಿ ನಾಯಕರು ಬರುವ ಸ್ಥಳಗಳನ್ನು ನಾವೇ ಸ್ವಚ್ಛಗೊಳಿಸುವ ಕಾರ್ಯಕ್ರಮ ಕೈಗೊಳ್ಳುತ್ತೇವೆ” ಎಂದು ಎಚ್ಚರಿಸಿದರು.
ಅಡ್ವೋಕೇಟ್ ಆರ್.ಪಿ. ಪಾಟೀಲ್ ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಮಾನವ ಧರ್ಮವನ್ನು ಸಾರಿದ್ದರು, ಅದೇ ತತ್ವದ ಆಧಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ನೀಡಿದ್ದಾರೆ. ಆದರೆ ಇಂದು ಬಿಜೆಪಿ ಹಾಗೂ ಮನುವಾದಿ ನಾಯಕರು ದಲಿತರು ಬಂದ ಸ್ಥಳವನ್ನು ತೊಳೆಯುವ ಮೂಲಕ ಸಂವಿಧಾನ ಹಾಗೂ ದೇಶವನ್ನು ವಿಭಜಿಸುವ ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಅಸ್ಪೃಶ್ಯತೆಯ ಮನಸ್ಥಿತಿಯನ್ನು ಕೈಬಿಡದಿದ್ದರೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು. ಬೈಟ್
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ಧರು.
