Belagavi

ಹಡಪದ ಅಪ್ಪಣ್ಣನವರ ಬದುಕು ಸಮಾಜಕ್ಕೆ ಬೆಳಕು: ಗುರುಸಿದ್ಧ ಸ್ವಾಮೀಜಿ

Share

ಬೆಳಗಾವಿ: ಬಸವಾದಿ ಶರಣರ ವಚನ ಆಂದೋಲನಕ್ಕೆ ಅಪಾರ ಶ್ರಮ, ತ್ಯಾಗ ಹಾಗೂ ನಿಷ್ಠೆಯಿಂದ ಕೊಡುಗೆ ನೀಡಿದವರಲ್ಲಿ ಕೆಳವರ್ಗದ ಶರಣರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಹಡಪದ ಅಪ್ಪಣ್ಣನವರ ಬದುಕು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ನಗರದ ಕಾರಂಜಿಮಠದಲ್ಲಿ ದಿನಾಂಕ ೧೭ರಂದು ನಡೆದ ೩೦೨ನೇ ಶ್ರಾವಣ ಮಾಸದ ವಿಶೇಷ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು. ಈ ಮಹಾನ್ ವಚನ ಚಳವಳಿಗೆ ಹಡಪದ ಅಪ್ಪಣ್ಣನಂತಹ ಶರಣರು ನೀಡಿದ ಕೊಡುಗೆ ಸ್ಮರಣೀಯವಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ವಿಜಯಲಕ್ಷ್ಮಿ ಪುಟ್ಟಿ ಅವರು ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಶರಣೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮ ಅವರು ಶರಣತತ್ವದ ಮಾರ್ಗದಲ್ಲಿ ಸಾಗುತ್ತಾ ಸರಳ, ಸುಂದರ ಹಾಗೂ ಆದರ್ಶ ದಾಂಪತ್ಯ ಜೀವನ ನಡೆಸಿದರು. ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಹೆಗಲು ಕೊಟ್ಟು ವಚನ ಚಳವಳಿಯನ್ನು ಬಲಪಡಿಸಿದವರಲ್ಲಿ ಹಡಪದ ಅಪ್ಪಣ್ಣನಂತಹ ಕೆಳವರ್ಗದ ಶರಣರ ಪಾತ್ರ ಗಮನಾರ್ಹವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಸುಧಾ ಪಾಟೀಲ ಮಾತನಾಡಿ, ಬಸವಾದಿ ಶರಣರು ಕನ್ನಡ ನಾಡಿನಲ್ಲಿ ಮಹಿಳೆಯರಿಗೆ ಮುಕ್ತ ಅವಕಾಶ ಕಲ್ಪಿಸುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೆ ಹೊಸ ಅರ್ಥ ನೀಡಿದರು. ಪುರುಷರೊಂದಿಗೆ ಮಹಿಳೆಯರೂ ಸಮಾನವಾಗಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ ವಚನ ಚಳವಳಿಯು ಇಂದಿಗೂ ಪ್ರಸ್ತುತವಾಗಿದೆ. ಹಡಪದ ಅಪ್ಪಣ್ಣನವರೊಂದಿಗೆ ಹೆಜ್ಜೆ ಹಾಕಿ ವಚನ ಚಳವಳಿಗೆ ಪ್ರೇರಣೆ ನೀಡಿದ ಲಿಂಗಮ್ಮ ಶರಣೆಯ ಕೊಡುಗೆ ಕೂಡ ಸ್ಮರಣೀಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಸವೇಶ್ವರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸರಳಾ ಹೆರೇಕರ್ ಅವರನ್ನು ಶ್ರೀಮಠದ ವತಿಯಿಂದ ಗುರುಸಿದ್ಧ ಸ್ವಾಮೀಜಿ ಅವರು ಸನ್ಮಾನಿಸಿ ಗೌರವಿಸಿದರು.

ಕುಮಾರೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ವಚನ ಪ್ರಾರ್ಥನೆ ಸಲ್ಲಿಸಿದರು. ಶ್ರೀಕಾಂತ ಶಾನವಾಡ ಸ್ವಾಗತಿಸಿದರು. ಎ. ಕೆ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವಿ. ಕೆ. ಪಾಟೀಲ ವಂದಿಸಿದರು

Tags:

error: Content is protected !!