ಕೇದಾರಪೀಠದ ಕೇದಾರನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಶ್ರೀ ಗುರುಲಿಂಗಯ್ಯಾ ದುಂಡಯ್ಯಾ ಹಿರೇಮಠ ಅವರು ವಿಧಿವಶರಾಗಿದ್ದಾರೆ. ಅವರ ಸ್ವಗ್ರಾಮವಾದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನೆರವೇರಿತು.
ಕೇದಾರಪೀಠದ ಕೇದಾರನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ 76 ವರ್ಷದ ಶ್ರೀ ಗುರುಲಿಂಗಯ್ಯಾ ದುಂಡಯ್ಯಾ ಹಿರೇಮಠ ಅವರು ಲಿಂಗೈಕ್ಯರಾಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರಾಗಿದ್ದ ಶ್ರೀಗಳ ಅಂತ್ಯಕ್ರಿಯೆಯನ್ನು ಇಂದು ಅವರ ಸ್ವಗ್ರಾಮದ ಜಮೀನಿನಲ್ಲಿ ಶ್ರೀಗಳ ಕುಟುಂಬಸ್ಥರು, ವಿವಿಧ ಮಠಾಧೀಶರು, ಬಂಧು-ಬಳಗದವರು ಹಾಗೂ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಶ್ರೀಗಳು ತಮ್ಮ ಸುದೀರ್ಘ ಧಾರ್ಮಿಕ ಸೇವೆ, ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ನಾಡಿನಾದ್ಯಂತ ಅಪಾರ ಭಕ್ತರ ಗೌರವ ಮತ್ತು ಪ್ರೀತಿಗೆ ಪಾತ್ರರಾಗಿದ್ದರು. ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಧಾರ್ಮಿಕ ನಾಯಕರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಸ್ವಗ್ರಾಮ ಚಿಕ್ಕಬಾಗೇವಾಡಿಯಲ್ಲಿ ಸಂಪೂರ್ಣ ಶೋಕದ ವಾತಾವರಣ ನಿರ್ಮಾಣವಾಗಿತ್ತು.

