Belagavi

ತಂದೆ-ತಾಯಿಯೇ ಜೀವಂತ ದೇವರು: ಹೆತ್ತವರನ್ನು ಗೌರವಿಸುವ ಕಡಾಡಿ ಸಹೋದರರ ನಡೆ ಶ್ಲಾಘನೀಯ-ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಜಿ

Share

ಇಂದಿನ ಆಧುನಿಕ ಕಾಲಘಟ್ಟದಲ್ಲಿ ‘ವಸುಧೈವ ಕುಟುಂಬಕಂ’ ಎಂಬ ಭಾವನೆ ಪುಸ್ತಕ ಮತ್ತು ಚಲನಚಿತ್ರಗಳಿಗೆ ಮಾತ್ರ ಸೀಮಿತವಾಗುತ್ತಿರುವಾಗ, ಕಡಾಡಿ ಸಹೋದರರು ತಮ್ಮ ಹೆತ್ತವರನ್ನು ಸಮಾಜದ ಮುಂದೆ ಗೌರವಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಅತ್ಯಂತ ಶ್ಲಾಘನೀಯ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಜಿಗಳು ಹೇಳಿದರು.

ಗೋಕಾಕ ಅಕ್ಕಮಹಾದೇವಿ ಸಭಾ ಭವನದಲ್ಲಿ ರವಿವಾರ ಆಯೋಜಿಸಲಾಗಿದ್ದ ಶ್ರೀಮತಿ ದುಂಡವ್ವ ಮತ್ತು ಶ್ರೀ ಭೀಮಪ್ಪ ಕಡಾಡಿ ಅವರ ‘ಸಹಸ್ರ ಪೂರ್ಣಚಂದ್ರ ದರ್ಶನ ಮಹೋತ್ಸವ’ದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಪಾರಿಜಾತ ಪರಿಮಳ’ ಕೃತಿ ಬಿಡುಗಡೆ:
ಕಾರ್ಯಕ್ರಮದಲ್ಲಿ ಭೀಮಪ್ಪ ಕಡಾಡಿ ಅವರ ಜೀವನದ ಯಶೋಗಾಥೆಯನ್ನು ಒಳಗೊಂಡ ‘ಪಾರಿಜಾತ ಪರಿಮಳ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮಿಜಿಗಳು, “ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ತಂದೆ-ತಾಯಿಯನ್ನೇ ಆದರ್ಶವಾಗಿಟ್ಟುಕೊಂಡಿರುವ ಕಡಾಡಿ ಸಹೋದರರು ಭಾರತೀಯ ಸಂಸ್ಕೃತಿಯ ನಿಜವಾದ ರಾಯಭಾರಿಗಳಾಗಿದ್ದಾರೆ” ಎಂದು ಬಣ್ಣಿಸಿದರು.

ಅವಿಭಕ್ತ ಕುಟುಂಬ ಸಂಸ್ಕೃತಿಯ ಹಿರಿಮೆ:
ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, “ಅಜ್ಜ-ಅಜ್ಜಿ, ತಂದೆ-ತಾಯಿ ಹಾಗೂ ಮಕ್ಕಳು ಒಟ್ಟಾಗಿ ಬಾಳುವ ಅವಿಭಕ್ತ ಕುಟುಂಬವು ಪ್ರೀತಿ ಮತ್ತು ನಂಬಿಕೆಯ ಸಂಕೇತವಾಗಿದೆ. ಇಂತಹ ತುಂಬು ಕುಟುಂಬಗಳಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಹಿರಿಯರನ್ನು ಗೌರವಿಸುವ ಗುಣ ಸ್ವಾಭಾವಿಕವಾಗಿ ಒಲಿಯುತ್ತದೆ” ಎಂದರು.

ಹುಣಶ್ಯಾಳ ಪಿ.ಜಿ. ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರು ಮಾತನಾಡಿ, “ಮನೆಯಲ್ಲಿರುವ ತಂದೆ-ತಾಯಿಯೇ ಜೀವಂತ ದೇವರು. ಅವರಿಗೆ ಸೇವೆ ಮಾಡದೆ ಜಗತ್ತಿನ ಗುಡಿ-ಗುಂಡಾರಗಳನ್ನು ಸುತ್ತಿದರೆ ಯಾವುದೇ ಪ್ರಯೋಜನವಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.

ಮಾಜಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿಗಳು ಹಾಗೂ ಶಿವಾಪೂರ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಮಹಾಸ್ವಾಮಿಜಿಗಳು, ಕೌಜಲಗಿಯ ವಿಠ್ಠಲ ಬೀರದೇವರ ದೇವರುಷಿ ರವರು ಸಾನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ಪ್ರಮುಖರಾದ ಅಶೋಕ್ ಪೂಜೇರಿ, ಭೀಮಶಿ ಗಡಾದ, ಡಾ. ಮಹಾಂತೇಶ ಕಡಾಡಿ, ರಾಜು ಮುನವಳ್ಳಿ, ಸುಭಾಸ ಪಾಟೀಲ, ಬಸಗೌಡ ಪಾಟೀಲ, ಬಿ.ಬಿ. ಬೆಳಕೂಡ, ಬಿ.ಎಸ್. ಗೋರೋಶಿ, ಎಸ್. ಆರ್ ಸೋಲವಾಲ್ಕರ, ಸೈದಪ್ಪಾ ಗದಾಡಿ, ಶಿವಬಸು ಹಂದಿಗುಂದ, ಕಲ್ಲಪ್ಪ ಚೌಕಾಶಿ, ಲಖನ ಸಂಸುದ್ದಿ, ರಮೇಶ ಉಟಗಿ, ಎಸ್ ಆರ್ ಭೋವಿ, ರಾಮಣ್ಣ ಹುಕ್ಕೇರಿ, ಮಾರುತಿ ವಿಜಯನಗರ, ಗೋವಿಂದ ಕೊಪ್ಪದ, ಸಂತೋಷ ಸೋನವಾಲ್ಕರ, ಬಸವರಾಜ ಕಡಾಡಿ, ಶ್ರೀಶೈಲ ತುಪ್ಪದ, ಶಿವಪ್ಪ ಕಡಾಡಿ, ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಗೂ ಸುತ್ತಮತ್ತಲಿನ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!