ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದ ಅಂಗವಾಗಿ ಮೆಜೆಸ್ಟಿಕ್ನ ಖೋಡೆ ಸರ್ಕಲ್ ಬಳಿ ಇರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ರಾಯಣ್ಣನವರ ಜನ್ಮದಿನ ಹಾಗೂ ತ್ಯಾಗದ ದಿನಗಳು ನಮ್ಮ ದೇಶದ ಸ್ವಾತಂತ್ರ್ಯ ಮತ್ತು ಗಣರಾಜ್ಯೋತ್ಸವ ದಿನಗಳೊಂದಿಗೆ ಕಾಕತಾಳೀಯವಾಗಿ ಬೆಸೆದುಕೊಂಡಿರುವುದು ಅತ್ಯಂತ ವಿಶೇಷ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಬಹಳ ಚಿಕ್ಕ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ದೊಡ್ಡ ತ್ಯಾಗ ಮಾಡಿದ ರಾಯಣ್ಣನವರು ಇಂದಿನ ಯುವ ಪೀಳಿಗೆಗೆ ಬಹುದೊಡ್ಡ ಸ್ಪೂರ್ತಿಯಾಗಿದ್ದಾರೆ ಎಂದರು. ರಾಯಣ್ಣನವರು ತಮ್ಮ ಕಾಲದಲ್ಲಿ ನಡೆಸಿದ ಹೋರಾಟ ಮತ್ತು ಪ್ರತಿಭಟನೆಗಳ ಫಲವಾಗಿ ನಾವಿಂದು ಸ್ವಾತಂತ್ರ್ಯದ ಗಾಳಿ ಉಸಿರಾಡುವಂತಾಗಿದೆ. ದೇಶದ ಐಕ್ಯತೆ, ಸಮಗ್ರತೆ ಹಾಗೂ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಸಾಗಲು ರಾಯಣ್ಣನವರ ಬದುಕು ಮತ್ತು ಬಲಿಷ್ಠ ಹೆಜ್ಜೆಗುರುತುಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿವೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಈ ಪವಿತ್ರ ವೃತ್ತಕ್ಕೆ ಸೂಕ್ತ ಹೆಸರಿಡಬೇಕು ಎಂದು ಜನಪ್ರತಿನಿಧಿಗಳು ಮತ್ತು ಸ್ಥಳೀಯ ನಾಯಕರು ಸಲ್ಲಿಸಿದ್ದ ಮನವಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಸ್ತಾವನೆ ಸಲ್ಲಿಸಿ, ಅನುಮತಿ ನೀಡುವ ಕೆಲಸ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಶೌರ್ಯ ಮತ್ತು ದೇಶಭಕ್ತಿಯ ಸಂಕೇತವಾದ ಸಂಗೊಳ್ಳಿ ರಾಯಣ್ಣನವರ ಸ್ಮರಣೆಯು ದೇಶದ ಪ್ರತಿಯೊಬ್ಬ ಯುವಕನಿಗೆ ಹೊಸ ಬಲ ಹಾಗೂ ಚೈತನ್ಯ ತುಂಬಲಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ, ಶಾಸಕ ದಿನೇಶ್ ಗುಂಡೂರಾವ್, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷ ಹೆಚ್ ಎಂ ರೇವಣ್ಣ, ಮಾಜಿ ಶಾಸಕ ನೆ ಲ ನರೇಂದ್ರ ಬಾಬು, ಮತ್ತಿತರರು ಉಪಸ್ಥಿತರಿದ್ದರು.
