ಬಸವ ಕಾಯಕ ಜೀವಿಗಳ ಸಂಘ ಹಾಗೂ ರಾಷ್ಟ್ರೀಯ ಬಸವದಳ ಬೆಳಗಾವಿ ಜಿಲ್ಲಾ ಘಟಕ ದಿಂದ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಮಧ್ಯರಾತ್ರಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.


ಇಲ್ಲಿನ ವಿಶ್ವಗುರು ಬಸವ ಮಂಟಪದಲ್ಲಿ ಮಾಜಿ ವೀರಯೋಧ ಪ್ರಕಾಶ ಪಾಟೀಲ ಅವರ ಸಮ್ಮುಖದಲ್ಲಿ ರಾತ್ರಿ 12 ಗಂಟೆ ಆಗುತ್ತಿದ್ದಂತೆ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಮಾಜಿ ಸೈನಿಕ ಪ್ರಕಾಶ ಪಾಟೀಲ ಮಾತನಾಡಿ, ತಾವು ಸೇನೆಯಲ್ಲಿ ತೋರಿದ ಪರಾಕ್ರಮವನ್ನು ವಿವರಿಸಿದರು. ನಾನು ಶತ್ರುಗಳ ಜೊತೆಗೆ ಕಾದಾಡಿ, ಒಂದು ಕೈ ಕಳೆದುಕೊಂಡಿದ್ದೇನೆ. ನನ್ನ ದೇಹದಲ್ಲಿ ಈಗಲೂ ಗುಂಡುಗಳಿವೆ. ಆದರೂ ನನ್ನಲ್ಲಿನ ದೇಶಭಕ್ತಿ ಕಡಿಮೆ ಆಗಿಲ್ಲ. ಪ್ರತಿಯೊಬ್ಬರೂ ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಲಿಂಗಾಯತ ಮುಖಂಡ ಶಂಕರ ಗುಡಸ ಮಾತನಾಡಿ, ಮಹಿಳೆಯರು, ಚಿಕ್ಕಮಕ್ಕಳು ಸೇರಿ ಎಲ್ಲರೂ ಒಟ್ಟಾಗಿ ಮಧ್ಯರಾತ್ರಿ ಸ್ವಾತಂತ್ರ್ಯ ದಿನ ಆಚರಿಸಿದೇವು. ದೇಶಭಕ್ತಿ ಮೂಡಿಸುವ ಮಕ್ಕಳ ಸಾಂಸ್ಕೃತಿಕ ಕಾರ್ಯಗಳು ನಮ್ಮೆಲ್ಲರ ಗಮನ ಸೆಳೆದವು. ಇಲ್ಲಿ ದೇಶಭಕ್ತಿ ಮೇಳೈಸಿತ್ತು. ಮುಂದಿನ ವರ್ಷ ಇನ್ನೂ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುತ್ತದೆ ಎಂದರು.
ಯುವ ಲಿಂಗಾಯತ ಮುಖಂಡ ಆನಂದ ಗುಡಸ ಮಾತನಾಡಿ, ಸುಮಾರು 500 ಜನರಿಗೆ ಬಿಸಿಬಿಸಿ ಜಿಲೇಬಿ ವಿತರಿಸಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಧರ್ಮಾಭಿಮಾನದ ಜೊತೆಗೆ ದೇಶಾಭಿಮಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

ಈ ವೇಳೆ ಇವೆಂಟ್ ಮ್ಯಾನೇಜರ್ ಸಂತೋಷ ಗುಡಸ, ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷ ಸೂರ್ಯಕಾಂತ ಭಾಂವಿ, ರಾಷ್ಟ್ರೀಯ ಬಸವದಳ ಬೆಳಗಾವಿ ಜಿಲ್ಲಾಧ್ಯಕ್ಷ ಅಶೋಕ್ ಬೆಂಡಿಗೇರಿ, ಪದಾಧಿಕಾರಿಗಳಾದ ಕೆ. ಶರಣ ಪ್ರಸಾದ್, ಮಹಾಂತೇಶ ಗುಡಸ, ಬಸವರಾಜ ಗುಡಸ, ಸಿದ್ದಾರ್ಥ್ ಗುಡಸ, ಮಲ್ಲಿಕಾರ್ಜುನ ಆಡಿನ್, ವೀರೇಶ್ ಉಳವಿ, ಶ್ರೀರಾಜ್ ಹಾವನ್ನವರ, ನೀತಿನ್ ಗುಡಸ, ಶರಣು ಲಿಂಗಾಯತ, ಸಂಕಲ್ಪ ಗುಡಸ, ಬಸವರಾಜ ಹಂಪಣ್ಣವರ, ಶ್ಯಾಮ ಗೌಡರ ಸೇರಿ ಮತ್ತಿತರರು ಇದ್ದರು.
