Belagavi

ರಸ್ತೆ ಅಪಘಾತ ತಡೆಗೆ ‘ಝೀರೋ ಫ್ಯಾಟಲಿಟಿ’ ಮಾದರಿ: ಡಿಸಿ ಮೊಹಮ್ಮದ್ ರೋಷನ್ ಸೂಚನೆ

Share

ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಸಂಭವಿಸುವ ಸಾವು-ನೋವುಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶದಿಂದ ‘ಝೀರೋ ಫ್ಯಾಟಲಿಟಿ ಡಿಸ್ಟ್ರಿಕ್ಟ್’ (ZFD) ಮಾದರಿಯಲ್ಲಿ ಕ್ರಿಯಾ ಯೋಜನೆ ರೂಪಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ನಿರಂತರವಾಗಿ ಅಪಘಾತ ಸಂಭವಿಸುವ ಸ್ಥಳಗಳನ್ನು ನಿಖರವಾಗಿ ಗುರುತಿಸಿ, ಆ ದತ್ತಾಂಶವನ್ನು ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ತಕ್ಷಣ ಹಸ್ತಾಂತರಿಸಬೇಕು. ಜಿಲ್ಲೆಯಲ್ಲಿನ ಕಪ್ಪು ಸ್ಥಳಗಳ ಪಟ್ಟಿ ಮಾಡುವಂತಹ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆಯುವಂತೆ ತಿಳಿಸಿದರು.


ನಗರ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳಿಗಾಗಿ ಅಗೆಯಲಾದ ರಸ್ತೆಗಳನ್ನು ದುರಸ್ತಿಗೊಳಿಸಿರುವುದಿಲ್ಲ. ಈ ಕುರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಜರುಗಿಸಿ ರಸ್ತೆ ದುರಸ್ತಿಗೆ ತ್ವರಿತವಾಗಿ ಕ್ರಮ ವಹಿಸಲು ಸೂಚಿಸಿದರು.ಅಪಘಾತಕ್ಕೊಳಗಾದವರಿಗೆ ತಕ್ಷಣ ಸೂಕ್ತ ಚಿಕಿತ್ಸೆ ದೊರಕಲು ಅನುವಾಗುವಂತೆ ಪಿ.ಎಮ್.ರಾಹತ್ ಯೋಜನೆಯಡಿ ಆಸ್ಪತ್ರೆಗಳ ಎಂಪಾನಲ್ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಪೋಲಿಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಾಕತಿ ಹಾಗೂ ಬಡೇಕೊಳ್ಳಮಠದ ಹತ್ತಿರ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ಸೂಚನಾ ಫಲಕಗಳನ್ನು ತ್ವರಿತವಾಗಿ ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ ಗ್ರಾಮೀಣ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳ ಮೂಲಕ ಹಾದು ಹೋಗುವಂತಹ ಹೆದ್ದಾರಿ, ಮುಖ್ಯ ರಸ್ತೆಗಳಲ್ಲಿ ಬೆಳಕಿನ ಹಾಗೂ ವೈಜ್ಞಾನಿಕವಾಗಿ ವೇಗ ನಿಯಂತ್ರಕಗಳನ್ನು ಅಳವಡಿಸುವುದರ ಮೂಲಕ ಅಪಘಾತಗಳನ್ನು ನಿಯಂತ್ರಿಸಲು ತಿಳಿಸಿದರು.ನಗರದಲ್ಲಿ ರಾತ್ರಿ ವೇಳೆಯಲ್ಲಿ ಗೋಚರಿಸದ ಸ್ಪೀಡ್ ಬ್ರೇಕರ್‌ಗಳಿಂದ (ವೇಗ ನಿಯಂತ್ರಕಗಳು) ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ನಗರದಾದ್ಯಂತ ಇರುವ ಎಲ್ಲಾ ಸ್ಪೀಡ್ ಬ್ರೇಕರ್‌ಗಳ ಸಮೀಕ್ಷೆ ಜರುಗಿಸಿ, ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರಿಸುವಂತಹ ಬಣ್ಣ ಬಳೆಯುವ ಕಾರ್ಯವನ್ನು ಕೈಗೊಳ್ಳಲು ಲೋಕೋಪಯೋಗಿ ಮತ್ತು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾತನಾಡಿ, ಹೆದ್ದಾರಿ ಸುರಕ್ಷತೆಯ ಜವಾಬ್ದಾರಿಯಿಂದ ಟೋಲ್ ಸಂಗ್ರಹಣಾ ಏಜೆನ್ಸಿಗಳು ಹಿಂದೆ ಸರಿಯುವಂತಿಲ್ಲ. ರಸ್ತೆ ನಿರ್ವಹಣೆ ಮತ್ತು ಸುರಕ್ಷತೆಯ ಹೊಣೆಯನ್ನು ಟೋಲ್ ನಿರ್ವಹಣೆದಾರರು ನಿರ್ವಹಿಸಬೇಕು. ರಸ್ತೆಯ ಗುಂಡಿಗಳು, ಪ್ಯಾಚ್ ವರ್ಕ್‌ಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರಯಾಣಿಕರ ಸುರಕ್ಷತೆಯೇ ಮೊದಲ ಪ್ರಥಮಾಧ್ಯತೆ ನೀಡಬೇಕು.
ಅಪಘಾತಕ್ಕೊಳಗಾದ ಸಂತ್ರಸ್ತರ ವಿಮೆ ವಿವರಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಅಂಕಿ-ಅಂಶಗಳನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಸೂಚನೆ ನೀಡಿದರು.
ಸೇವ್‌ಲೈಫ್ ಫೌಂಡೇಶನ್ ಸಂಸ್ಥೆಯ ಪ್ರತಿನಿಧಿ ಡಾ. ಹೇಮಂತ್ ಅವರು ಜಿಲ್ಲೆಯ ಅಪಘಾತಗಳ ಅಂಕಿ-ಅಂಶಗಳ ವಿವರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಮ್.ಎಮ್. ಬಸರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ. ಗಡಾದ್, ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!