ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನದಡಿ ಬೃಹತ್ ಬೈಕ್ ರ್ಯಾಲಿ ವೈಭವದಿಂದ ನೆರವೇರಿತು. ನೂರಾರು ನಾಗರಿಕರು ಹಾಗೂ ಬಿಜೆಪಿ ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು ಬೈಕ್ ರ್ಯಾಲಿಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ ಮೆರೆದರು.


ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಬೃಹತ್ ‘ಹರ್ ಘರ್ ತಿರಂಗಾ’ ಬೈಕ್ ರ್ಯಾಲಿಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಶಹಾಪುರದ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ರಸ್ತೆಯ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನವನದಿಂದ ಆರಂಭಗೊಂಡ ಈ ರ್ಯಾಲಿಯು ಹೊಸೂರ ಬಸವಣ ಗಲ್ಲಿ, ಖಾಸಭಾಗ ಸಂಭಾಜಿ ರಸ್ತೆ, ನಾಥಪೈ ಸರ್ಕಲ್, ಖಡೇ ಬಝಾರ್ ಹಾಗೂ ಮಹಾತ್ಮಾ ಫೂಲೆ ರಸ್ತೆ ಮಾರ್ಗವಾಗಿ ಸಾಗಿ ಗೋವಾವೇಸ್‌ನ ಜಗಜ್ಯೋತಿ ಬಸವೇಶ್ವರ ವೃತ್ತ ತಲುಪಿ ಸಂಪನ್ನಗೊಂಡಿತು.

ರ್ಯಾಲಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅಭಯ ಪಾಟೀಲ್, “ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ದಕ್ಷಿಣ ಕ್ಷೇತ್ರದ ಸುಮಾರು 22,000 ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಬೃಹತ್ ಗುರಿ ಹೊಂದಲಾಗಿದ್ದು, ಇಂದಿನ ರ್ಯಾಲಿಯಲ್ಲಿ ಸುಮಾರು 5,000ಕ್ಕೂ ಹೆಚ್ಚು ಬೈಕ್ ಸವಾರರು ಭಾಗವಹಿಸಿ ಜಾಗೃತಿ ಮೂಡಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಹುತಾತ್ಮರನ್ನು ಸ್ಮರಿಸುವುದು ನಮ್ಮ ಕರ್ತವ್ಯ,” ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿ ಮಹಿಳಾ ಮೋರ್ಚಾ ಮಹಾನಗರ ಅಧ್ಯಕ್ಷೆ ಗೀತಾ ಸುತಾರ್ ಮಾತನಾಡಿ, ಯುವ ಪೀಳಿಗೆಯಲ್ಲಿ ದೇಶಭಕ್ತಿ ಹಾಗೂ ಹೆಮ್ಮೆಯ ಭಾವನೆ ಮೂಡಿಸುವ ಉದ್ದೇಶದಿಂದ ಈ ರ್ಯಾಲಿ ಸಂಘಟಿಸಲಾಗಿದೆ ಎಂದರು. ಈ ಹಿಂದೆ ಸರ್ಕಾರಿ ಕಚೇರಿ ಮತ್ತು ಶಾಲೆ-ಕಾಲೇಜುಗಳಿಗೆ ಮಾತ್ರ ಸೀಮಿತವಾಗಿದ್ದ ತ್ರಿವರ್ಣ ಧ್ವಜವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಯಾನದ ಮೂಲಕ ಪ್ರತಿಯೊಬ್ಬ ನಾಗರಿಕನ ಮನೆಗೆ ತಲುಪಿಸುವಂತೆ ಮಾಡಲಾಗಿದೆ ಎಂದು ಅವರು ಶಾಸಕ ಅಭಯ ಪಾಟೀಲ್ ಹಾಗೂ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ಧರು.
