Chikkodi

ಅನೈತಿಕ ಸಂಬಂಧಕ್ಕಾಗಿ ಪತಿಯ ಕೊಲೆ ಪ್ರಕರಣ: ಶವ ಹೊರತೆಗೆಯಲು ಕೋಳಿ ಬಲಿ ಕೊಡಲು ಮುಂದಾಗಿದ್ದ ತಾಲೂಕಾಡಳಿತ!

Share

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಕೊಲೆ ಮಾಡಿ ಜಮೀನಿನಲ್ಲಿ ಹೂತುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವ ಹೊರತೆಗೆಯುವ ಕಾರ್ಯಾಚರಣೆ ವೇಳೆ ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆ ಮೂಢನಂಬಿಕೆಗೆ ಮೊರೆ ಹೋದ ವಿಲಕ್ಷಣ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ.

ಖಡಕಲಾಟ ಗ್ರಾಮದ ನಿವಾಸಿ ರಾಘು ಗಾವಡೆ (40)ಎಂಬುವವರನ್ನು ಅನೈತಿಕ ಸಂಬಂಧದ ಕಾರಣಕ್ಕಾಗಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಹಂತಕರು ಕೊಲೆಯಾದ ರಾಘು ಅವರ ಮೃತದೇಹವನ್ನು ಅವರದ್ದೇ ಜಮೀನಿನಲ್ಲಿ ಹೂತುಹಾಕಿದ್ದರು. ಪ್ರಕರಣದ ತನಿಖೆಗಾಗಿ ಶವವನ್ನು ಹೊರತೆಗೆಯಲು ಚಿಕ್ಕೋಡಿ ಎಸಿ ಎಸ್.ಎಸ್. ಸಂಪಗಾವಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದ ಈ ಕಂಪ್ಯೂಟರ್ ಯುಗದಲ್ಲೂ ಕಾನೂನು ಪಾಲಿಸಬೇಕಾದ ಪೋಲಿಸ್ ಇಲಾಖೆ ಹಾಗೂ ತಾಲೂಕಾಡಳಿತದ ಅಧಿಕಾರಿಗಳೇ ಮೂಢನಂಬಿಕೆಯ ಬಲೆಗೆ ಬಿದ್ರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.ಜಮೀನಿನಲ್ಲಿ ಹೂತಿಟ್ಟ ಮೃತದೇಹವನ್ನು ಹೊರತೆಗೆಯುವ ಮುನ್ನ, ಪ್ರಾಣಿ ಬಲಿ (ಕೋಳಿ ಬಲಿ) ಕೊಟ್ಟು ಬಳಿಕ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದರು‌ ಎನ್ನಲಾಗಿದೆ.

ಶವ ಅಗೆಯುವ ಮುನ್ನ ಮೃತದೇಹ ಹೂತಿದ್ದ ಸ್ಥಳದಲ್ಲೇ ಕೋಳಿ ಬಲಿ ಕೊಡಲು ಪೊಲೀಸರು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಈ ಮೂಢನಂಬಿಕೆಯ ಕೃತ್ಯವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು (ವಿಡಿಯೋ ಮಾಡಲು) ಪ್ರಾರಂಭಿಸುತ್ತಿದ್ದಂತೆ ಅಧಿಕಾರಿಗಳು ಕಂಗಾಲಾಗಿದ್ದಾರೆ.

ಮಾಧ್ಯಮಗಳ ವಿಡಿಯೋ ರೆಕಾರ್ಡಿಂಗ್ ಗಮನಿಸಿದ ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು, ತರಾತುರಿಯಲ್ಲಿ ತಮ್ಮ ಯೋಜನೆಯನ್ನು ಬದಲಾಯಿಸಿದರು. ಕೋಳಿ ಬಲಿ ಕೊಡಲು ತಂದಿದ್ದ ವ್ಯಕ್ತಿ ತಕ್ಷಣವೇ ಕೋಳಿಯನ್ನು ವಾಪಸ್ ತೆಗೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಹಾಗೂ ಜಾಗೃತಿ ಮೂಡಿಸಬೇಕಾದ ಸರ್ಕಾರಿ ಇಲಾಖೆಗಳೇ ಶವ ಹೊರತೆಗೆಯುವ ಕಾರ್ಯಾಚರಣೆಗೆ ಪ್ರಾಣಿ ಬಲಿಯಂತಹ ಮೂಢನಂಬಿಕೆಯ ಹಾದಿ ಹಿಡಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಧ್ಯಮಗಳ ಸಕಾಲಿಕ ಪ್ರವೇಶದಿಂದಾಗಿ ಸ್ಥಳದಲ್ಲಿ ನಡೆಯಬೇಕಿದ್ದ ಅನಾಚಾರವೊಂದು ಕೊನೆಕ್ಷಣದಲ್ಲಿ ರದ್ದಾಗಿದೆ.

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!