Chikkodi

ಪತ್ರಕರ್ತ ಎಂಬುದು ವೃತ್ತಿಯಲ್ಲ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ: ಜಗದೀಶ ಕವಟಗಿಮಠ

Share

ಪತ್ರಕರ್ತ ಎಂಬುದು ಬರಿ ವೃತ್ತಿಯಲ್ಲ, ಅದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಹೀಗಾಗಿ ನೈತಿಕ ಮೌಲ್ಯಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸಬೇಕಿದೆ ಎಂದು ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಅಭಿಪ್ರಾಯಪಟ್ಟರು.

ಚಿಕ್ಕೋಡಿ ಪಟ್ಟಣದ ಸಾಯಿ ಸೌಹಾರ್ದ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಇಂದು ಸಮಾಜದ ವಿವಿಧ ಕ್ಷೇತ್ರಗಳು ನಕಲಿ ಪತ್ರಕರ್ತರ ಹಾವಳಿಯಿಂದ ನಲುಗಿಹೋಗಿವೆ. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ಸಮೂಹವು ತನ್ನ ನೈಜತೆ ಹಾಗೂ ಗಂಭೀರತೆಯನ್ನು ಸರಿಪಡಿಸಿಕೊಳ್ಳಬೇಕಿದೆ ಎಂದ ಅವರು ಪತ್ರಕರ್ತರ ಕುಟುಂಬಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಸಾಯಿ ಸೌಹಾರ್ದ ವತಿಯಿಂದ 5 ಲಕ್ಷ ರೂಪಾಯಿ ವಿಮೆ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಪತ್ರಕರ್ತರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಂಪಾದನಾ ಸ್ವಾಮೀಜಿಯವರು ಮಾಧ್ಯಮಗಳು ಸಮಾಜದಲ್ಲಿ ನಡೆಯುವ ಶೋಷನೀಯ ಹಾಗೂ ನಕಾರಾತ್ಮಕ ಕೃತ್ಯಗಳನ್ನು ವೈಭವೀಕರಿಸುವ ಬದಲು, ಸಮಾಜಕ್ಕೆ ಪ್ರೇರಣೆಯಾಗುವ ಉತ್ತಮ ಕಾರ್ಯಗಳನ್ನು ಹೆಚ್ಚು ಬೆಳಕಿಗೆ ತರುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಪತ್ರಕರ್ತರ ಸಂಘದ ಜಿಲ್ಲಾ ಸಂಚಾಲಕ ಮಹಾದೇವ ಪೂಜೇರಿ, ಪತ್ರಕರ್ತರಾದ ಕಾಶಿನಾಥ ಸುಳಕೂಡೆ ಹಾಗೂ ರಾಜೇಂದ್ರ ಕೋಳಿ ಮಾತನಾಡಿ, ಪತ್ರಕರ್ತರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘವು ಸದಾ ಕಾರ್ಯೋನ್ಮುಖವಾಗಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬ ಪತ್ರಕರ್ತನಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡಲು ಸರ್ಕಾರದ ಮೇಲೆ ಸೂಕ್ತ ಒತ್ತಡ ಹೇರಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅರ್ಹ ಪತ್ರಕರ್ತರಿಗೆ ಸದಸ್ಯತ್ವ ಕಾರ್ಡ್ ವಿತರಿಸಲಾಯಿತು.ಪತ್ರಕರ್ತರಿಗೆ ವಿಮಾ ಸೌಲಭ್ಯ ಕಲ್ಪಿಸಿದ ಸಾಯಿ ಸೌಹಾರ್ದದ ಅಧ್ಯಕ್ಷ ಜಗದೀಶ ಕವಟಗಿಮಠ ಹಾಗೂ ಉಪಾಧ್ಯಕ್ಷ ಷಡಕ್ಷರಿ ಮೂಗೇರಿ ಹಾಗೂ
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಂಜೀವ ಕಾಂಬಳೆ.ಪತ್ರಕರ್ತರ ಸಂಘದ ಜಿಲ್ಲಾ ಸಂಚಾಲಕ ಮಹಾದೇವ ಪೂಜೇರಿ ಜಿಲ್ಲಾ ಗ್ರಂಥಾಲಯ ಪ್ರಶಸ್ತಿ ಪುರಸ್ಕೃತೆ ವಿಮಲಾ ಚಿನಕೇಕರಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸದಾಶಿವ ಹಾದಿಮನಿ, ಸಾಗರ ಬಿಸ್ಕೋಪ, ಅಕ್ರಂ ಅರ್ಕಾಟೆ, ಚಂದ್ರಶೇಖರ ಚಿನಕೇಕರ, ರವಿ ಮಂಗಾವೆ, ಸುಶಾಂತ ಜಮಖಂಡಿಕರ, ಅನಿಲ ದಲಾಲ, ಸಂತೋಷ ಕಾಮತ, ಅಜೀತ ಸುತಾರ, ಲಾಲಸಾಬ ತಟಗಾರ, ಮಹಾಂತೇಶ ಮಠಪತಿ, ರಾಜು ಸಂಕೇಶ್ವರಿ, ತಾತ್ಯಾಸಾಹೇಬ ಕಾಮತ, ಗುರುನಾಥ ಹಿರೇಮಠ, ರಾಜು ಕೋಳಿ, ಮಕ್ರಂದ ದ್ರವಿಡ,ಮಹಾದೇವ ಪಾಟೀಲ,ಅಣ್ಣಾಸಾಹೇಬ ಕದಮ, ಮಿಯಾಲಾಲ್ ಕಿಲ್ಲೆದಾರ ಉಪಸ್ಥಿತರಿದ್ದರು.

ಮಾಧ್ಯಮ ಅಕಾಡೆಮಿ ಪುರಸ್ಕೃತ ಸಂಜೀವ ಕಾಂಬಳೆ ಸ್ವಾಗತಿಸಿದರು. ಮಹಾದೇವ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ರೋಖಡೆ ಕಾರ್ಯಕ್ರಮ ನಿರೂಪಿಸಿದರೆ, ಡಿ.ಕೆ. ಉಪ್ಪಾರ ವಂದನಾರ್ಪಣೆ ನೆರವೇರಿಸಿದರು.

Tags:

error: Content is protected !!