Belagavi

2028ಕ್ಕೆ ಬಿಜೆಪಿಗೆ ವಿಪಕ್ಷ ಸ್ಥಾನವೂ ಸಿಗಲ್ಲ

Share

ಬಿಜೆಪಿಯವರು ಜೀವಂತವಾಗಿ ಇರಬೇಕಾದರೆ ಸರ್ಕಾರ ಟೇಕಾಫ್ ಆಗಿಲ್ಲ ಎಂದು ಚರ್ಚೆ ಮಾಡಲೇಬೇಕು, ಇಲ್ಲದಿದ್ದರೆ ಅವರು ಕೋಮಾಗೆ ಹೋಗುತ್ತಾರೆ ಎಂದು ಸಚಿವ ಲಕ್ಷ್ಮಣ ಸವದಿ ಕಮಲ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷವಾಗಿ ಕೆಲಸ ಮಾಡುವುದು ಅವರ ಜವಾಬ್ದಾರಿಯಾಗಿದ್ದು, ಹಾಸಿಗೆ ಹಾಸಿಕೊಂಡು ಮಲಗಿಕೊಳ್ಳಲು ಇದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಲಕ್ಷ್ಮಣ ಸವದಿ, ಬಿಜೆಪಿ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. 2028ರ ಚುನಾವಣೆಯಲ್ಲಿ ಬಿಜೆಪಿಗೆ ವಿರೋಧ ಪಕ್ಷದಲ್ಲಿ ಕೂರಲು ಕೂಡ ಅವಕಾಶ ಸಿಗುವುದಿಲ್ಲ ಮತ್ತು ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳಲು ಅವರು ಓಡಾಡಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಇನ್ನು ಸ್ಪೀಕರ್ ಅವರನ್ನು ಕಿತ್ತುಹಾಕಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ತಮಗೆ ಹೊರಟ್ಟಿಯವರ ಬಗ್ಗೆ ಅಪಾರ ಗೌರವವಿದ್ದು, ಅವರು ಮುಖ್ಯಮಂತ್ರಿಗಳಿಂದ ಸತ್ಕಾರ ಸ್ವೀಕರಿಸಿ ಗೌರವಯುತವಾಗಿಯೇ ನಿರ್ಗಮಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಬಿಜೆಪಿಯ ಬರ ಅಧ್ಯಯನ ಪ್ರವಾಸದ ಕುರಿತು ಮಾತನಾಡಿದ ಅವರು, ವಿಪಕ್ಷವಾಗಿ ಬರ ಪರಿಸ್ಥಿತಿ ವೀಕ್ಷಿಸಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ಸೆಳೆಯುವುದು ಅವರ ಕರ್ತವ್ಯವಾಗಿದೆ. ಹಾಸಿಗೆ ಹಾಸಿಕೊಂಡು ಮಲಗಿಕೊಳ್ಳಲು ಅವರೆಲ್ಲಿದ್ದಾರಾ ಎಂದು ಪ್ರಶ್ನಿಸಿದ ಸವದಿ, ವಿರೋಧ ಪಕ್ಷದವರು ಮಲಗಿದ್ದಾರೆ ಎಂಬ ಮಾತು ಕೇಳಿಬಾರದಂತೆ ಜನರ ಸಮಾಧಾನಕ್ಕಾಗಿ ಈ ಪ್ರವಾಸ ಮಾಡುತ್ತಿದ್ದಾರೆ ಎಂದರು.
ಇನ್ನು ದೆಹಲಿ ಹೈಕಮಾಂಡ್ ಸೂಚನೆಯಂತೆ ಜಿಲ್ಲೆಯ ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿ, 2028ಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟಿತವಾಗಿ ಶ್ರಮಿಸುವುದಾಗಿ ತಿಳಿಸಿದರು.

ಖಾತೆಗಳ ಬಗ್ಗೆ ಚರ್ಚೆ ಮಾಡುವುದು ಅನಗತ್ಯವೆಂದ ಸವದಿ, ಯಾವುದೇ ಖಾತೆ ನೀಡಿದರೂ ಅದನ್ನು ಚೆನ್ನಾಗಿ ನಿರ್ವಹಿಸಿದರೆ ಬೆಲೆ ಬರುತ್ತದೆ ಎಂದರು. ಮಹಿಳಾ ಸಚಿವರ ನೇಮಕ ಕುರಿತು ಸಿಎಂ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲೇ ಭರ್ತಿಯಾಗಲಿದೆ ಎಂದರು. ತಮಗೆ ವಹಿಸಿದ ಜಿಲ್ಲೆಗಳ ಅತಿವೃಷ್ಟಿ-ಅನಾವೃಷ್ಟಿ ವೀಕ್ಷಣೆ ಮುಗಿಸಿ ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದ ಅವರು, ಬಿಜೆಪಿ ತೋರೆದ ಮೇಲೂ ತಮ್ಮನ್ನು ದೊಡ್ಡ ಅಂತರದಿಂದ ಗೆಲ್ಲಿಸಿದ ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ ಧನ್ಯವಾದ ಅರ್ಪಿಸಿದರು.

Tags:

error: Content is protected !!