ಬೆಳಗಾವಿ ಜಿಲ್ಲೆಯು ಅತಿ ಹೆಚ್ಚು ಸೈನಿಕರನ್ನು ಹೊಂದಿರುವ ಹೆಮ್ಮೆಯ ನಾಡಾಗಿದ್ದು, ಯೋಧರ ತ್ಯಾಗವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಂಸದ ಜಗದೀಶ್ ಶೆಟ್ಟರ್ ಅವರು ಕರೆ ನೀಡಿದರು.


ಬೆಳಗಾವಿಯ ಮಾಜಿ ಸೈನಿಕರ ಮಹಾ ಒಕ್ಕೂಟದ ವತಿಯಿಂದ ನಗರದ ಧರ್ಮನಾಥ ಭವನದಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ಮುಖ್ಯ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಸ್ಮಾರಕಕ್ಕೆ ಪುಷ್ಪಚಕ್ರ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, 1999ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ ಧೈರ್ಯದಿಂದ ಹೋರಾಡಿ ಕಾರ್ಗಿಲ್ನಲ್ಲಿ ವಿಜಯ ಪತಾಕೆ ಹಾರಿಸಿತು ಎಂದರು. ಸಾವಿರಾರು ಸೈನಿಕರ ತ್ಯಾಗ ಮತ್ತು ಬಲಿದಾನದಿಂದ ಈ ಗೆಲುವು ಸಾಧ್ಯವಾಗಿದೆ. ಮೈನಸ್ ಡಿಗ್ರಿ ಚಳಿಯಲ್ಲಿ ಸೈನಿಕರು ಗಡಿ ಕಾಯುವಾಗ ವೈರಿಗಳ ಒಳನುಸುಳುವಿಕೆಯನ್ನು ಮೆಟ್ಟಿ ನಿಂತು ‘ಆಪರೇಷನ್ ವಿಜಯ್’ ಮೂಲಕ ಭಾರತ ಐತಿಹಾಸಿಕ ವಿಜಯ ಸಾಧಿಸಿತು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರ ಹಾಗೂ ಅವರ ಕುಟುಂಬಗಳ ತ್ಯಾಗವನ್ನು ಸ್ಮರಿಸುವುದು ಮತ್ತು ಮುಂದಿನ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬದವರಿಗೆ ಗೌರವ ಸನ್ಮಾನ, ‘ಬೆಳಗಾವಿ ಸೈನಿಕ ರತ್ನ’ ಪ್ರಶಸ್ತಿ ಪ್ರದಾನ ಹಾಗೂ ವೀರನಾರಿಯರನ್ನು ಗೌರವಿಸಲಾಯಿತು. 1965 ಹಾಗೂ 1971ರ ಭಾರತ–ಪಾಕಿಸ್ತಾನ ಯುದ್ಧಗಳಲ್ಲಿ ಭಾಗವಹಿಸಿದ್ದ ಹಿರಿಯ ಮಾಜಿ ಸೈನಿಕರಿಗೂ ವಿಶೇಷ ಸನ್ಮಾನ ಸಲ್ಲಿಸಲಾಯಿತು. ಅಲ್ಲದೆ, ಅತ್ಯುತ್ತಮ ಶಿಕ್ಷಕ, ವೈದ್ಯ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಯಿತು ಹಾಗೂ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಾಜಿ ಸೈನಿಕರ ಮಕ್ಕಳಿಗೆ ಸನ್ಮಾನಿಸಿ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸೈನಿಕರ ಮಹಾಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ ಅವರು, “1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ತೋರಿದ ಅಪ್ರತಿಮ ಶೌರ್ಯ ಹಾಗೂ ಬಲಿದಾನ ಸ್ಮರಣೀಯವಾದದ್ದು. ಮೈನಸ್ ಡಿಗ್ರಿ ಚಳಿಯಲ್ಲಿ ನಮ್ಮ ಸೈನಿಕರು ಗಡಿ ಕಾಯುವಾಗ ವೈರಿಗಳು ಮಾಡಿದ ಒಳನುಸುಳುವಿಕೆಯನ್ನು ಮೆಟ್ಟಿ ನಿಂತು ‘ಆಪರೇಷನ್ ವಿಜಯ್’ ಮೂಲಕ ಭಾರತ ಐತಿಹಾಸಿಕ ವಿಜಯ ಸಾಧಿಸಿತು” ಎಂದು ಸ್ಮರಿಸಿದರು..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕವಿತಾ ಮಿಶ್ರಾ ಭಾಗವಹಿಸಿದ್ದರು. ಈ ವೇಳೆ ರಮೇಶ್ ಚೌಗಲಾ, ಸುನೀತಾ ಪಟ್ಟಣಶೆಟ್ಟಿ, ಅನೀತಾ ಮಿರ್ಜಿ, ಪರ್ವೇಜ್ ಹವಾಲ್ದಾರ್, ಲಕ್ಷ್ಮೀಬಾಯಿ ಬಡಸ್, ಡಾ. ಸತೀಶ್ ಚೌಲಿಗೇರ, ರಾಮನಗೌಡ ಪಾಟೀಲ್, ಮಡಿವಾಲಪ್ಪ ಕಲಭಾವಿ, ಅಶೋಕ್ ಮಜಗಿ, ಚಂದ್ರಶೇಖರ್ ಸವದಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
