ನೀಟ್ ಪರೀಕ್ಷೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿರುವ ಕುರಿತು ಸಚಿವ ಎಂ.ಬಿ. ಪಾಟೀಲ ಅವರು ವಿಜಯಪುರದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ವಿಜಯಪುರ ನಗರದಲ್ಲಿ ಮಾದ್್ಯಮಗಳ ಜೊತೆಯಲ್ಲಿ ಮಾತನಾಡಿದ ಅವರು, “ಕೊನೆಗೂ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದ್ದಾರೆ. 47 ದಿನಗಳ ಕಾಲ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡಲಾಯಿತು. ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕುಂಬಕರ್ಣ ನಿದ್ರೆಯಿಂದ ಎದ್ದು ಕೊನೆಗೂ ರಾಜೀನಾಮೆ ಪಡೆಯುವಂತೆ ಮಾಡಿದ್ದಾರೆ” ಎಂದು ಟೀಕಿಸಿದರು.
“ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ರಾಹುಲ್ ಗಾಂಧಿ ಹಾಗೂ ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಈ ರಾಜೀನಾಮೆ ಸಾಧ್ಯವಾಗಿದೆ. ವಿದ್ಯಾರ್ಥಿಗಳ ಹೋರಾಟ ಆರಂಭವಾದ 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕಾಗಿತ್ತು” ಎಂದು ಹೇಳಿದರು.
ರಾಹುಲ್ ಗಾಂಧಿ ಪ್ರಧಾನಿ ಕ್ಷಮೆಯಾಚನೆಗೆ ಆಗ್ರಹಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಪ್ರಧಾನಿ ಮೋದಿ ಅವರು ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಲೇಬೇಕು. ನೀಟ್ ಪರೀಕ್ಷೆ ವಿವಾದದಿಂದ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಬಹುದು, ಆದರೆ ಅವರ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ” ಎಂದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಸ್ಮರಿಸಿದ ಎಂ.ಬಿ. ಪಾಟೀಲ, “ವಿಶ್ವವೇ ಮೆಚ್ಚುವಂತಹ ಆರ್ಥಿಕ ವ್ಯವಸ್ಥೆಯನ್ನು ಮನಮೋಹನ್ ಸಿಂಗ್ ದೇಶಕ್ಕೆ ನೀಡಿದ್ದರು. ಆದರೆ ಪ್ರಧಾನಿ ಮೋದಿ ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ” ಎಂದು ಟೀಕಿಸಿದರು.
“ಬೆಲೆ ಏರಿಕೆ, ಸಿಇಟಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ರಾಜಕಾರಣ ನಡೆಯುತ್ತಿದೆ. ಆದರೆ ಈ ಬಾರಿ ವಿದ್ಯಾರ್ಥಿಗಳ ಹೋರಾಟದಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲರೂ ಒಂದಾಗಿ ಭಾಗವಹಿಸಿದ್ದಾರೆ. ಮೋದಿ ಯುಗ ಈಗ ಅಂತ್ಯದತ್ತ ಸಾಗುತ್ತಿದೆ. ಈ ಹೋರಾಟದ ಯಶಸ್ಸಿನ ಶ್ರೇಯಸ್ಸು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಸಲ್ಲಬೇಕು” ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪ್ರತಿಕಿಯಿಸಿದ ಸಚಿವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಎಂ.ಬಿ. ಪಾಟೀಲ, “ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಬಹುದು. ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ನಾನು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇನೆ. ಯಾರಿಗೆ ಕೊಡುತ್ತಾರೆ ಎಂಬುದು ಅವರ ತೀರ್ಮಾನ, ಆದರೆ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಸಿಗಬೇಕು” ಎಂದರು.
ಬರ ಘೋಷಣೆ ಕುರಿತಂತೆ ಪ್ರತಿಕ್ರಿಯಿಸಿ ವಿಜಯಪುರ ಜಿಲ್ಲೆಯಲ್ಲಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಕುರಿತು ಮಾತನಾಡಿದ ಅವರು, “ಬರ ಘೋಷಣೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಅಗತ್ಯ ಕ್ರಮವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಬೇಕು” ಎಂದು ಹೇಳಿದರು.
