Belagavi

ಬೆಳಗಾವಿ: ಮರಾಠಾ ಮಂಡಳ ಶಾಲೆಯಲ್ಲಿ ವಿಜೃಂಭಿಸಿದ ಆಷಾಢ ಏಕಾದಶಿ – ರಿಂಗಣ, ಪಲ್ಲಕ್ಕಿ ಸೊಬಗು!

Share

ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿರುವ ಮರಾಠಾ ಮಂಡಳ ಸಂಸ್ಥೆಯಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಪರಂಪರೆಯ ಅಪರೂಪದ ಸಂಗಮ ಕಂಡುಬಂದಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬಿತ್ತಲು ಆಯೋಜಿಸಲಾಗಿದ್ದ ಈ ಪಲ್ಲಕ್ಕಿ ಉತ್ಸವ ಇಡೀ ಪ್ರದೇಶವನ್ನು ಭಕ್ತಿರಸದಲ್ಲಿ ಮುಳುಗಿಸಿತು.

ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿರುವ ಮರಾಠಾ ಮಂಡಳ ಸಂಸ್ಥೆಯಲ್ಲಿ ಸಂಸ್ಥೆಯ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಶ್ರೀ ವಿಠ್ಠಲ-ರುಕ್ಮಿಣಿ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ತದನಂತರ ಸಂಸ್ಥೆಯ ಆವರಣದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಪಲ್ಲಕ್ಕಿ ಮೆರವಣಿಗೆಯನ್ನು ನಡೆಸಲಾಯಿತು. ತಾಳ-ಮೃದಂಗಗಳ ನಾದ ಮತ್ತು ಹರಿನಾಮದ ಜಯಘೋಷಗಳೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಉತ್ಸಾಹದಿಂದ ಈ ಆಚರಣೆಯಲ್ಲಿ ಭಾಗವಹಿಸಿ ಮೆರಗು ನೀಡಿದರು.

ಸಂಸ್ಥೆಯ ಕೆಲವು ವಿದ್ಯಾರ್ಥಿಗಳು ಶ್ರೀ ವಿಠ್ಠಲ ಮತ್ತು ಮಾತಾ ರುಕ್ಮಿಣಿಯ ವೇಶಭೂಷಣ ಧರಿಸಿ ಎಲ್ಲರ ಗಮನ ಸೆಳೆದರು. ಮೆರವಣಿಗೆಯುದ್ದಕ್ಕೂ ಮೊಳಗಿದ ಭಜನೆ, ಕೀರ್ತನೆ ಮತ್ತು ಅಭಂಗಗಳ ಇಂಪಾದ ಗಾಯನವು ವಾತಾವರಣದಲ್ಲಿ ಭಕ್ತಿಭಾವವನ್ನು ಹೆಚ್ಚಿಸಿತು. ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮಿಕ ಮೌಲ್ಯಗಳ ಅರಿವು ಮೂಡಿಸುವುದೇ ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.

ಮರಾಠಾ ಮಂಡಳ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ನಾಗರಾಜು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಮರಾಠಾ ಮಂಡಳ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯ ಹಾಗೂ ಉಪಪ್ರಾಂಶುಪಾಲರಾದ ಎಮ್. ಕೆ. ಪಾಟೀಲ, ಸೆಂಟ್ರಲ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ಬಿ. ಎಮ್. ಪಾಟೀಲ, ಜಿಜಾಮಾತಾ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಎಲ್. ಬಿ. ಜಾಧವ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಪಾಟೀಲ ಅವರು ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!