State

ಬಿಜೆಪಿಯವರ ಮೇಲೆ ಮೊಟ್ಟೆ ಹೊಡೆದಿದ್ದು ಸರಿಯಲ್ಲ;

Share

ನಾವೂ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಮಂಗಳವಾರದಂದು ಕಾಂಗ್ರೆಸ್ ಕಚೇರಿ ಬಳಿ ಮೊಟ್ಟೆ ಹೊಡೆದಿದ್ದನ್ನು ಸರಿ ಎಂದು ಹೇಳುವುದಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಕೆ.ಜಿ.ರಸ್ತೆ ಬಳಿ ಪ್ರತಿಕ್ರಿಯೆ ನೀಡುತ್ತಾ, ಕಾನೂನಿನ ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಮ್ಮ ಗೃಹ ಸಚಿವರು ಈಗಾಗಲೇ ತಿಳಿಸಿದ್ದಾರೆ. ಬಿಜೆಪಿಯವರು ಹಿಂದೆ ಏನೇನು ಮಾಡಿದ್ದರು ಎಂದು ಅವರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಲಾಠಿ, ಮಚ್ಚು, ರೈಫಲ್ಗಳು ಸಿಕ್ಕಿದ್ದವು. ಪೊನ್ನಂಪೇಟೆಯ ಶಾಲೆಯ ಆವರಣದಲ್ಲಿ ರೈಫಲ್ ತರಬೇತಿ ನೀಡಿದ್ದರು. ನಿಮ್ಮದೂ ಇತಿಹಾಸಗಳಿವೆ ಎಂದರು. ರಾಜ್ಯದಲ್ಲಿ ಕೊತ್ವಾಲ್ ಆಡಳಿತ ನಡೆಯುತ್ತಿದೆ ಎನ್ನುವ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಖುಷಿಗೆ ಏನು ಬೇಕಾದರೂ, ಹೆಂಗೆ ಬೇಕಾದರೂ ಮಾತನಾಡಿಕೊಳ್ಳಲಿ. ನಾನು ಈ ಸ್ಥಾನಕ್ಕೆ ಬರಲು ವಿದ್ಯಾರ್ಥಿ ನಾಯಕನಾಗಿ ಬೆಳೆದವನು. ಹಳ್ಳಿಯಲ್ಲಿ ಹುಟ್ಟಿದ ನಾನು ಪರಿಶುದ್ಧವಾದ ರಾಜಕಾರಣ, ಆಡಳಿತ ಮಾಡುತ್ತಿದ್ದೇನೆ. ಇದನ್ನು ಅವರ ಕೈಯಲ್ಲಿ ತಡೆದುಕೊಳ್ಳಲು ಆಗುತ್ತಿಲ್ಲ ಎಂದರೆ ಏನು ಮಾಡಲು ಆಗುವುದಿಲ್ಲ” ಎಂದು ವ್ಯಂಗ್ಯವಾಡಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಈಗ ಮಾತನಾಡುವ ಬದಲು ಪ್ರಾರಂಭದಲ್ಲೇ ಮಾತನಾಡಬೇಕಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಾರನ್ನೂ ಕಾಪಾಡಲು ಕೇಂದ್ರ ಸರ್ಕಾರ ಮುಂದಿರಬಾರದು ಎಂದು ಆಗ್ರಹಿಸಿದರು. ಬಿಜೆಪಿಯವರೇ ನಿಮ್ಮ ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೇಶದ ಯುವ ಜನತೆಯ ಭವಿಷ್ಯ ಹಾಳಾಗುತ್ತಿದೆ. ವೈಫಲ್ಯವನ್ನು ಬಿಜೆಪಿಯವರು ಒಪ್ಪಿಕೊಳ್ಳಬೇಕು. ಒಬ್ಬ ವ್ಯಕ್ತಿ ರಾಜೀನಾಮೆ ಕೊಡುವುದರಿಂದ ಏನಾಗಲಿದೆ? ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದಾಗ ಇಂತಹ ಘಟನೆ ಬಗ್ಗೆ ಯಾರಾದರೂ ಜವಾಬ್ದಾರಿ ಹೊರಬೇಕಲ್ಲವೇ? ಇದಕ್ಕೆ ಯಾರು ಹೊಣೆ?” ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಪ್ರತಿಪಕ್ಷಗಳ ಮತ್ತು ಎಲ್ಲ ಜನರ ಹಕ್ಕು. ಇಂತಹ ಸಂದರ್ಭದಲ್ಲಿ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ, ತೊಂದರೆ ನೀಡಲಾಗಿದೆ. ಸುದ್ದಿ ಮಾಧ್ಯಮಗಳ ಮೇಲೆ ನಿರ್ಬಂದ ಹೇರಿ, ಧಮ್ಕಿ ಹಾಕಿ ಪ್ರಸಾರ ಆಗದಂತೆ ನೋಡಿಕೊಳ್ಳಲಾಗಿದೆ. ಅಲ್ಲಿದ್ದವರು ಮಾಡಿದ ವಿಡಿಯೋಗಳು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಮಾಧ್ಯಮಗಳು ಪ್ರಜಾಪ್ರಭುತ್ವದ ಅಂಗ. ಹೀಗಿದ್ದಾಗ ಮಾಧ್ಯಮಗಳು ಪ್ರಶ್ನೆ ಮಾಡದೇ ಏನು ಮಾಡುತ್ತಿದ್ದವು. ನೀವುಗಳು ಏಕೆ ಪ್ರತಿಭಟನೆ ಮಾಡಲಿಲ್ಲ. ಪ್ರಶ್ನೆ ಮಾಡದ ನಿಮ್ಮಗಳ ತಪ್ಪೂ ಇದೇ. ಸಾಮಾಜಿಕ ಜಾಲತಾಣದಲ್ಲಿ ಬಂದ ಮೇಲೆ ಮಾಧ್ಯಮಗಳು ವಿಷಯಗಳನ್ನು ಎತ್ತಿಕೊಂಡಿವೆ. ಇದು ಹೊಸ ತಲೆಮಾರಿನ ಹೋರಾಟ” ಎಂದು ಸಿಎಂ ಪ್ರತಿಕ್ರಿಯೆ ನೀಡಿದರು.

Tags:

error: Content is protected !!