ಬೆಳಗಾವಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಕುರಿತು ಪ್ರಮುಖ ಮಾಹಿತಿ ನೀಡಿದ್ದಾರೆ. ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ 100% ಫಾರ್ಮ್ ವಿತರಣೆ ಪೂರ್ಣಗೊಂಡಿದ್ದು, ಪಟ್ಟಿಯಲ್ಲಿ ಹೆಸರು ಮತ್ತು ಪೋಲಿಂಗ್ ಸ್ಟೇಷನ್ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳುವುದು ಮತದಾರರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ ಒಟ್ಟು 41.07 ಲಕ್ಷ ಮತದಾರರಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇಕಡಾ 100 ರಷ್ಟು ಫಾರ್ಮ್ ವಿತರಣೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಗೈರುಹಾಜರಾದ, ಸ್ಥಳಾಂತರಗೊಂಡ, ಮೃತರಾದ ಹಾಗೂ ನಕಲಿ ಮತದಾರರನ್ನು (ASD) ಪತ್ತೆ ಹಚ್ಚಲು ಬಿಎಲ್ಒ (BLO) ಸಿಬ್ಬಂದಿ ನೇರವಾಗಿ ಮನೆ ಬಾಗಿಲಿಗೆ ತೆರಳಿ ನಿಗದಿತ ಫಾರ್ಮ್ ಮತ್ತು ಸ್ಟಿಕ್ಕರ್ಗಳನ್ನು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಶೇಕಡಾ 76 ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದ್ದು, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶೇ. 60 ಹಾಗೂ ಉತ್ತರ ಕ್ಷೇತ್ರದಲ್ಲಿ ಶೇ. 51 ರಷ್ಟು ಸಾಧನೆಯಾಗಿದೆ. ಬಿಎಲ್ಒ ಫೆಸಿಲಿಟೇಶನ್ ಸೆಂಟರ್ಗಳಲ್ಲಿ ಸ್ವೀಕರಿಸಲಾಗುವ ಫಾರ್ಮ್ಗಳನ್ನು ಆನ್ಲೈನ್ ಮಾಡುವ ಕೆಲಸ ವೇಗವಾಗಿ ನಡೆಯುತ್ತಿದ್ದು, ಅಗತ್ಯ ಬಿದ್ದಲ್ಲಿ ಇನ್ನೂ ಒಂದು ವಾರ ಕಾಯ್ದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ವಾಸಸ್ಥಳ ಬದಲಾಯಿಸಿದ ಅಥವಾ ಪೋಲಿಂಗ್ ಸ್ಟೇಷನ್ ಮಾಹಿತಿ ಇಲ್ಲದ ಮತದಾರರು ತಮ್ಮ ವ್ಯಾಪ್ತಿಯ ಬಿಎಲ್ಒಗಳನ್ನು ತಕ್ಷಣವೇ ಸಂಪರ್ಕಿಸಬೇಕಾಗಿದೆ. ಮನೆಗಳಲ್ಲಿ ಸಿಗದ ಮತದಾರರ ಅನುಕೂಲಕ್ಕಾಗಿ ಪ್ರತಿಯೊಂದು ಪೋಲಿಂಗ್ ಸ್ಟೇಷನ್ ಅನ್ನು “ಬಿಎಲ್ಒ ಫೆಸಿಲಿಟೇಶನ್ ಸೆಂಟರ್” ಆಗಿ ಪರಿವರ್ತಿಸಲಾಗಿದ್ದು, ಸಾರ್ವಜನಿಕರು ನೇರವಾಗಿ ಅಲ್ಲಿಗೆ ತೆರಳಿ ಅರ್ಹತಾ ಫಾರ್ಮ್ ಸಲ್ಲಿಸಬಹುದಾಗಿದೆ. ಮೃತರಾದ, ಸ್ಥಳಾಂತರಗೊಂಡ ಹಾಗೂ ನಕಲಿ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು (BLA) ಹಾಗೂ ನಾಯಕರೊಂದಿಗೆ ಹಂಚಿಕೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳಿದ್ದಲ್ಲಿ ಅಥವಾ ಜೀವಂತ ಇರುವವರನ್ನು ಮೃತರೆಂದು ತಪ್ಪಾಗಿ ದಾಖಲಿಸಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಆಗಸ್ಟ್ 8 ರವರೆಗೆ ಕಾಲಾವಕಾಶವಿದ್ದು, ನಾಗರಿಕರು ಹಾಗೂ ಎಲ್ಲಾ ಪಕ್ಷಗಳು ಈ ಪರಿಶೀಲನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೋರಲಾಗಿದೆ.
