Belagavi

ಬೆಳಗಾವಿಯಲ್ಲಿ ರೋಟರಿ ಕ್ಲಬ್‌ ಬೆಲಗಾಮ್ ನಾರ್ಥನಿಂದ ಪರಿಸರ ಸ್ನೇಹಿ ಗಣೇಶೋತ್ಸವ ಅಭಿಯಾನ

Share

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಬಳಕೆಗೆ ಜಿಲ್ಲಾಡಳಿತ ಹಾಗೂ ರೋಟರಿ ಕ್ಲಬ್‌ ಬೆಲಗಾಮ್ ನಾರ್ಥ್ ಜಂಟಿಯಾಗಿ ಚಾಲನೆ ನೀಡಿವೆ. ನಗರದ 10 ಪ್ರಮುಖ ಕೇಂದ್ರಗಳಲ್ಲಿ ಮಣ್ಣಿನ ಮೂರ್ತಿಗಳ ವಿತರಣೆಗೆ ಚಾಲನೆ ಸಿಕ್ಕಿದ್ದು, ಪಿಒಪಿ ಮೂರ್ತಿ ತ್ಯಜಿಸಿ ಪರಿಸರ ರಕ್ಷಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕರೆ ನೀಡಿದ್ದಾರೆ.

ರೋಟರಿ ಕ್ಲಬ್‌ ಆಫ್ ಬೆಲಗಾಮ್ ನಾರ್ಥ್ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ವಿವಿಧ 10 ಪ್ರಮುಖ ಸ್ಥಳಗಳಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳ ವಿತರಣೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳ ಬಳಕೆಗೆ ನಿಷೇಧ ಹೇರಲಾಗುತ್ತಿದ್ದು, ಪರಿಸರ ರಕ್ಷಣೆಗಾಗಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ಕೇವಲ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನೇ ಪ್ರತಿಯೊಂದು ಮನೆಯಲ್ಲೂ ಪ್ರತಿಷ್ಠಾಪಿಸಿ, ಪೂಜಿಸುವಂತೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಪರಿಸರ ಮಾಲಿನ್ಯ ತಡೆಯಲು ರೋಟರಿ ಕ್ಲಬ್‌ ಬೆಲಗಾಮ್ ನಾರ್ಥ್ ವಿಶೇಷ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ವಿತರಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ನಗರದ ವಿವಿಧ 10 ಪ್ರಮುಖ ಕೇಂದ್ರಗಳಾದ ಬಾಮ್ನೆ ಟವರ್ಸ್ (ಗೋವಾ ವೇಸ್), ಕುಮಾರಸ್ವಾಮಿ ಲೇಔಟ್, ಭಾಗ್ಯನಗರ, ಕಿರ್ಲೋಸ್ಕರ್ ರೋಡ್, ವಡಗಾಂವ್, ಖಾಸ್‌ಬಾಗ್ ಸರ್ಕಲ್, ಶಿವಬಸವನಗರ, ತಿಲಕವಾಡಿ, ಹಿಂಡಲಗಾ ಹಾಗೂ ಮಂಡೋಳಿ ರಸ್ತೆಗಳಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳ ಬುಕಿಂಗ್ ಮತ್ತು ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್‌ ಬೆಲಗಾಮ್ ನಾರ್ಥ್ ಪದಾಧಿಕಾರಿಗಳಾದ ಸುಧೀರ್‌ ಅವರು ಮಾತನಾಡಿ, ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ರೋಟರಿ ಕ್ಲಬ್ ಬೆಲಗಾಮ್ ನಾರ್ಥ್ ವತಿಯಿಂದ ಕಳೆದ ಏಳು ವರ್ಷಗಳಿಂದ ಸತತವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಈ ಬಾರಿಯೂ ಸಹ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಅಭಿಯಾನದ ಕುರಿತು ಚರ್ಚಿಸಿದ್ದು, ಅವರು ಅತ್ಯಂತ ಉತ್ಸಾಹದಿಂದ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದರು. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮತ್ತು ವಿಷಕಾರಿ ರಾಸಾಯನಿಕಗಳಿಂದ ತಯಾರಿಸಿದ ಮೂರ್ತಿಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಗಳಲ್ಲಿ ಸುಂದರ ಹಾಗೂ ಶುದ್ಧ ಮಣ್ಣಿನ ಗಣಪತಿ ಮೂರ್ತಿಗಳನ್ನೇ ಕೂರಿಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ವಿನಂತಿಸಿದರು.

ರೋಟರಿ ಕ್ಲಬ್‌ ಬೆಲಗಾಮ್ ನಾರ್ಥ್ ನಿಕಟಪೂರ್ವ ಅಧ್ಯಕ್ಷ ಹಾಗೂ ಹಿರಿಯ ರೋಟೇರಿಯನ್ ಇರ್ಫಾನ್ ಶೇಖ್ ಅವರು ಮಾತನಾಡಿ, ಕಳೆದ ಏಳು ವರ್ಷಗಳಿಂದ ರೋಟರಿ ಕ್ಲಬ್ ಬೆಲಗಾಮ್ ನಾರ್ಥ್ ವತಿಯಿಂದ ನಿರಂತರವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳ ವಿತರಣೆ ಮತ್ತು ಉತ್ತೇಜನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಬರಲಾಗುತ್ತಿದೆ ಎಂದರು. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳ ಬಳಕೆಯಿಂದ ಜಲಮೂಲಗಳು ದೂಷಿತಗೊಂಡು, ಗಣೇಶ ಮೂರ್ತಿಗಳ ವಿಟಂಬನೆಯಾಗುವುದನ್ನು ತಡೆಯಲು ಮತ್ತು ಪರಿಸರ ನೈರ್ಮಲ್ಯವನ್ನು ಕಾಯ್ದುಕೊಳ್ಳಲು ಈ ಹಸಿರು ಅಭಿಯಾನ ರೂಪಿಸಲಾಗಿದೆ ಎಂದರು.

Tags:

error: Content is protected !!