Belagavi

‘ಕ್ಯಾರಿ ಆನ್ ಮರಾಠಾ’ ಶೈಲಿಯ ರಿಯಲ್ ಲವ್ ಸ್ಟೋರಿ: ಜೀವಭಯದಲ್ಲಿ ಪ್ರೇಮಿಗಳು: ಎಸ್‌ಪಿ ಕಚೇರಿ ಮೆಟ್ಟಿಲೇರಿದ ಜೋಡಿ

Share

ಸಿನಿಮಾವನ್ನು ಮೀರಿಸುವಂತಿದೆ ಈ ಪ್ರೇಮಿಗಳ ಹೋರಾಟ. ಒಂಬತ್ತು ವರ್ಷಗಳ ಸುದೀರ್ಘ ಪ್ರೀತಿ, ಹೆತ್ತವರ ದಿಗ್ಬಂಧನ, ಮೂರು ವರ್ಷಗಳ ಕಣ್ಣೀರಿನ ಕಥೆಯ ನಂತರ ಕೊನೆಗೂ ಈ ಜೋಡಿ ಒಂದಾಗಲು ಸಾಗರದಾಚೆಯಿಂದ ಬಂದಿದೆ. ತವರು ಮನೆಯವರಿಂದ ಜೀವಭಾಯವ ಎದುರಿಸುತ್ತಿರುವ ಈ ಪ್ರೇಮಿಗಳು ಈಗ ರಕ್ಷಣೆಗಾಗಿ ಬೆಳಗಾವಿ ಪೊಲೀಸ್ ಮೆಟ್ಟಿಲೇರಿದ್ದಾರೆ.

ಪ್ರೀತಿ ಕುರುಡು. ಅದಕ್ಕೆ ಯಾವುದೇ ಭಾಷೆ, ಧರ್ಮದ ಬೇಧಭಾವವಿಲ್ಲ ಎನ್ನುತ್ತಾರೆ. ಅದು ಇಲ್ಲಿ ನಿಜವಾದಂತಿದೆ. ಯುವಕ ಕನ್ನಡಿಗ, ಯುವತಿ ಮರಾಠಿ ಆದರೇ ಇವರಲ್ಲಿದೆ ನಿಷ್ಕಲ್ಮಶ ಪ್ರೀತಿ. ಹೌದು, ಇದು ಹಿಂದೆ ತೆರೆ ಕಂಡಿದ್ದ ಕ್ಯಾರಿ ಆನ್ ಮರಾಠಾ ಚಲನಚಿತ್ರವನ್ನು ನೆನಪಿಸುವಂತಹ ಲವ್ ಸ್ಟೋರಿಯಾಗಿದೆ. ಬೆಳಗಾವಿಯ ದತ್ತ ಮಂದಿರದಲ್ಲಿ ಮೂರು ವರ್ಷಗಳ ಹಿಂದೆಯೇ ಮದುವೆಯಾಗಿದ್ದ ರೋಹನ್ ಪೂಜಾರಿ ಮತ್ತು ಈಶಾ ಶೇಟಕರ್ ಜೋಡಿಯ ಪ್ರೇಮಕಥೆ ಈಗ ಮುನ್ನೆಲೆಗೆ ಬಂದಿದೆ. ಶಾಲಾ ದಿನಗಳಿಂದಲೇ ಕೊಂಕಣಿ ಭಾಷೆಯ ಮೂಲಕ ಪರಸ್ಪರ ಪ್ರೀತಿಸುತ್ತಿದ್ದ ಇವರ ಮದುವೆಗೆ ಯುವತಿಯ ಶ್ರೀಮಂತ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸೌಂಡ್ ಸಿಸ್ಟಮ್ ಅಂಗಡಿಯಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದ ರೋಹನ್‌ನನ್ನು ಒಪ್ಪದ ಯುವತಿಯ ಪೋಷಕರು, ಹಿಂದೆ ಗೋವಾದ ಪಣಜಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

ಅಂದು ಪೊಲೀಸರ ಸಮ್ಮುಖದಲ್ಲಿ ಮದುವೆ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಮಗಳನ್ನು ಮನೆಗೆ ಕರೆದೊಯ್ದ ಹೆತ್ತವರು, ಆಕೆಯನ್ನು ಮೂರು ವರ್ಷಗಳ ಕಾಲ ಮನೆಯಲ್ಲೇ ದಿಗ್ಬಂಧನದಲ್ಲಿಟ್ಟಿದ್ದರು ಎನ್ನಲಾಗಿದೆ. ಯುವತಿಯಿಂದ ಮೊಬೈಲ್ ಕಿತ್ತುಕೊಂಡು, ರೋಹನ್‌ನನ್ನು ಮರೆಯುವಂತೆ ತೀವ್ರ ಕಿರುಕುಳ ನೀಡಲಾಗಿತ್ತು. ಆದರೆ ಹೆತ್ತವರ ಒತ್ತಾಯಕ್ಕೆ ಮಣಿಯದ ಯುವತಿ ಈಶಾ, ಇತ್ತೀಚೆಗೆ ಹೇಗೋ ರೋಹನ್‌ಗೆ ಕರೆ ಮಾಡಿ ತನ್ನ ನೋವನ್ನು ತೋಡಿಕೊಂಡು ಮತ್ತೆ ಮನೆಯಿಂದ ಓಡಿಬಂದಿದ್ದಾಳೆ.

ಯಾವತ್ತಿದ್ದರೂ ತನ್ನ ಪತಿಯೊಂದಿಗೇ ಬಾಳಲು ನಿರ್ಧರಿಸಿರುವ ಈಶಾ ಮತ್ತು ರೋಹನ್, ಇದೀಗ ಕಾನೂನುಬದ್ಧವಾಗಿ ನೋಂದಣಿ ಮದುವೆ (ರಿಜಿಸ್ಟರ್ ಮ್ಯಾರೇಜ್) ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಆದರೆ ಯುವತಿಯ ಪ್ರಭಾವಿ ಕುಟುಂಬದಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಪ್ರಾಣಾಪಾಯದ ಭೀತಿ ಇರುವುದರಿಂದ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕೆಂದು ಬೆಳಗಾವಿ ಎಸ್‌ಪಿ ಕಚೇರಿಗೆ ಆಗಮಿಸಿ ಮಾಧ್ಯಮಗಳ ಮುಂದೆ ಈ ಪ್ರೇಮಿಗಳು ಅಳಲು ತೋಡಿಕೊಂಡಿದ್ದಾರೆ.

Tags:

error: Content is protected !!