Belagavi

ಬೆಳಗಾವಿ ಜಿಮಖಾನಾ ಕ್ಲಬ್‌ನಲ್ಲಿ ಫೈರಿಂಗ್: ಸುರೇಶ್ ಜಾಲಗಾರ ಹತ್ಯೆಗೆ ಯತ್ನ…

Share

ಬೆಳಗಾವಿ ನಗರದ ಪೊಲೀಸ್ ಕಮಿಷನರ್ ಕಚೇರಿ ಸಮೀಪದಲ್ಲೇ ಇರುವ ಜಿಮಖಾನಾ ಕ್ಲಬ್‌ನಲ್ಲಿ ಮಂಗಳವಾರ ರಾತ್ರಿ ಭೀಕರ ಗುಂಡಿನ ದಾಳಿ ನಡೆದಿದೆ. ರಮ್ಮಿ ಆಡುತ್ತಿದ್ದ ಸುರೇಶ್ ಜಾಲಗಾರ ಎಂಬಾತನ ಹತ್ಯೆಗೆ ಐದು ಜನ ದುಷ್ಕರ್ಮಿಗಳ ಗ್ಯಾಂಗ್ ಸ್ಕೆಚ್ ಹಾಕಿ ದಾಳಿ ನಡೆಸಿದ್ದು, ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಕಮಿಷನರ್ ಭೇಟಿ ನೀಡಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.

ಬೆಳಗಾವಿ ನಗರದ ಪೊಲೀಸ್ ಕಮೀಷನರ್ ಕಚೇರಿ ಸಮೀಪದ ಜಿಮಖಾನಾ ಕ್ಲಬ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಗುಂಡಿನ ದಾಳಿಯಿಂದ ಆತಂಕದ ವಾತಾವರಣ ನಿರ್ಮಾಣವಾಯಿತು. ರಮ್ಮಿ ಆಡುತ್ತಿದ್ದ ವೇಳೆ ಸುರೇಶ್ ಜಾಲಗಾರ ಎಂಬಾತನ ಮೇಲೆ ದುಷ್ಕರ್ಮಿಗಳು ಹತ್ಯೆಗೆ ಯತ್ನ ನಡೆಸಿದ್ದಾರೆ. ಐವರು ಆರೋಪಿಗಳು ಜಿಮಖಾನಾ ಕ್ಲಬ್‌ಗೆ ಬಂದಿದ್ದು, ಇಬ್ಬರು ಹೊರಗೆ ಕಾವಲು ನಿಂತರೆ, ಮೂವರು ಒಳ ಪ್ರವೇಶಿಸಿ ಸುರೇಶ್ ಜಾಲಗಾರನ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿಗಳು ಮೊದಲು ಗನ್‌ನಿಂದ ತಲೆಗೆ ಹೊಡೆದು, ಬಳಿಕ ಗುಂಡು ಹಾರಿಸಲು ಯತ್ನಿಸಿದ್ದಾರೆ. ಆದರೆ ಸುರೇಶ್ ಅವರನ್ನು ತಳ್ಳಿ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸುರೇಶ್ ಹೊರಗೆ ಓಡಿ ಹೋದ ಬಳಿಕ ಆರೋಪಿಗಳು ಕ್ಲಬ್‌ನಿಂದ ಹೊರಬಂದು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಿಂದ ಕೆಲಕಾಲ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಪೊಲೀಸರು ಸುರೇಶ್ ಜಾಲಗಾರನನ್ನು ವಶಕ್ಕೆ ಪಡೆದು ಕ್ಯಾಂಪ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಈ ಹಿಂದೆ ನಾನು ಪ್ರಫುಲ್ ಪಾಟೀಲ್ ಎಂಬಾತನ ಮೇಲೆ ಫೈರಿಂಗ್ ಮಾಡಿದ್ದೆ. ಅದೇ ಪ್ರಕರಣದ ಸೇಡು ತೀರಿಸಿಕೊಳ್ಳಲು ಪ್ರಫುಲ್ ಪಾಟೀಲ್ ಕಡೆಯವರು ನನ್ನ ಮೇಲೆ ಹತ್ಯೆಗೆ ಯತ್ನ ನಡೆಸಿದ್ದಾರೆ” ಎಂದು ಸುರೇಶ್ ಜಾಲಗಾರ ಪೊಲೀಸರಿಗೆ ತಿಳಿಸಿದ್ದಾನೆ.
ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ಯೂನಿಯನ್ ಜಿಮ್ಖಾನಾ ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ತೀವ್ರ ಕಾನೂನು ಕ್ರಮಗಳ ಎಚ್ಚರಿಕೆ ನೀಡಿದ್ದಾರೆ. ಈ ಗ್ಯಾಂಗ್ ವಾರ್ ಹಿನ್ನೆಲೆಯಲ್ಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸದ್ಯ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣದಲ್ಲಿ ಸಂತ್ರಸ್ತ ಸುರೇಶ್ ಜಾಲಗಾರ್ ನೀಡಿದ ದೂರಿನ ಮೇರೆಗೆ ಪ್ರಫುಲ್ ಪಾಟೀಲ್ ಹಾಗೂ ಇತರರ ವಿರುದ್ಧ ಕೊಲೆ ಯತ್ನ ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿದ್ದರೆ, ಜಿಮ್‌ಖಾನಾ ಮ್ಯಾನೇಜರ್ ನೀಡಿದ ಎರಡನೇ ದೂರಿನನ್ವಯ ಸುರೇಶ್ ಜಾಲಗಾರ್, ರಾಜು ಕಡೋಲಕರ್, ಇಮ್ರಾನ್ ಪಠಾಣ್ ಹಾಗೂ ಕುಂದನ್ ಯಳ್ಳೂರಕರ ವಿರುದ್ಧ ಆಸ್ತಿ ಹಾನಿ ಮತ್ತು ಗಲಾಟೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಪ್ರಫುಲ್ ಮತ್ತು ಸುರೇಶ್ ಇಬ್ಬರೂ ಹಳೇ ಜೂಜುಕೋರರಾಗಿದ್ದು, ಕಳೆದ ವರ್ಷ ಪ್ರಫುಲ್ ಮೇಲೆ ನಡೆದ ಹಲ್ಲೆಗೆ ಸುರೇಶ್ ಆರೋಪಿಯಾಗಿದ್ದ ದ್ವೇಷವೇ ಈ ಕೃತ್ಯಕ್ಕೆ ಕಾರಣವಾಗಿದೆ. ಇಂತಹ ಸಮಾಜವಿರೋಧಿ ಶಕ್ತಿಗಳ ವಿರುದ್ಧ ಗಡಿಪಾರು ಅಥವಾ ಗುಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ನಿಯಮ ಉಲ್ಲಂಘಿಸುವ ಕ್ಲಬ್‌ಗಳನ್ನು ತಕ್ಷಣವೇ ಬಂದ್ ಮಾಡಲಾಗುವುದು ಎಂದಿದ್ದಾರೆ. ಇದೇ ವೇಳೆ, ದಂಧೆಗಳಲ್ಲಿ ಪೊಲೀಸರ ಶಾಮೀಲಾತಿ ಅಥವಾ ಕರ್ತವ್ಯ ಲೋಪದ ಕುರಿತು ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು, ಲೋಪವೆಸಗಿದ ಅಧಿಕಾರಿಗಳನ್ನು ಅಮಾನತು ಅಥವಾ ಸೇವೆಯಿಂದ ವಜಾಗೊಳಿಸುವುದಾಗಿ ಹಾಗೂ ಪ್ರಫುಲ್ ಪಾಟೀಲ್ ಶಿನೋಳಿ ಭಾಗದಲ್ಲಿ ಜೂಜಾಟ ಮುಂದುವರಿಸಿರುವ ಆರೋಪದ ಬಗ್ಗೆಯೂ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Tags:

error: Content is protected !!