ಬೆಳಗಾವಿ ಗ್ರಾಮೀಣ ಭಾಗದ ವಾಘವಡೆ ಗ್ರಾಮದಲ್ಲಿ ಜೈ ರಾಮಕೃಷ್ಣ ಹರಿ ವಾರಕರಿ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಶ್ರೀ ಜ್ಞಾನೋಬಾ-ತುಕಾರಾಂ ಪಾಲ್ಕಿ ಉತ್ಸವಕ್ಕೆ ಭಾನುವಾರ ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಚಾಲನೆ ನೀಡಲಾಗಿದೆ. ತಾಳ-ಮೃದಂಗಗಳ ನಾದ, ವಿಠ್ಠಲ ನಾಮದ ಅಖಂಡ ಜಯಘೋಷ ಹಾಗೂ ನೂರಾರು ವಾರಕರಿಗಳ ಭಕ್ತಿಪ್ರವಾಹಕ್ಕೆ ಇಡೀ ಗ್ರಾಮೀಣ ಭಾಗವೇ ತಲೆದೂಗಿದೆ.


ಉತ್ಸವದ ಆರಂಭದಲ್ಲಿ ಮಾವುಲಿಯ ಭವ್ಯ ರಥಕ್ಕೆ ಪೂಜೆ ಸಲ್ಲಿಸಿ ಪಾಲ್ಕಿ ಯಾತ್ರೆಗೆ ಚಾಲನೆ ನೀಡಲಾಯಿತು. ಹ.ಭ.ಪ. ಭುಜಂಗ್ ಮಹಾರಾಜ್ ಪಾಟೀಲ್ ಹಾಗೂ ಇತರ ಗಣ್ಯರು ವಾರಕರಿ ಪರಂಪರೆಯು ಭಕ್ತಿ, ಶಿಸ್ತು, ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುತ್ತದೆ ಎಂದು ಅಭಿಪ್ರಾಯಪಟ್ಟರು. ನೂರಾರು ಮಹಿಳೆಯರು ತಲೆಯ ಮೇಲೆ ತುಳಸಿ ಮತ್ತು ಜಲಕುಂಭಗಳನ್ನು ಹೊತ್ತು ದಿಂಡಿಯಲ್ಲಿ ಹೆಜ್ಜೆ ಹಾಕಿದರು. ಇದೇ ವೇಳೆ ಪ್ರಮುಖರಾದ ಶಿವಾಜಿರಾವ್ ಬೆಳಗುಂದಕರ್ ಅವರು, ಇಂದಿನ ಯುವ ಪೀಳಿಗೆಯು ವ್ಯಸನಗಳಿಂದ ದೂರವಿದ್ದು ಸಂತರು ತೋರಿದ ಭಕ್ತಿ ಹಾಗೂ ಸನ್ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ದಿಂಡಿ ಯಾತ್ರೆಗಾಗಿ ವಾಘವಡೆ ಗ್ರಾಮಸ್ಥರು ಹಾಗೂ ಯುವಕರು ಉತ್ತಮ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅತ್ಯಂತ ಆಕರ್ಷಕ ಹಾಗೂ ಭವ್ಯವಾದ ಮಾವುಲಿ ರಥವನ್ನು ಸಿದ್ಧಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೇ ಇಂತಹ ಬೃಹತ್ ರಥವನ್ನು ನಿರ್ಮಿಸಿರುವುದು ಇದೇ ಮೊದಲು ಎಂಬ ಹೆಮ್ಮೆ ಗ್ರಾಮಸ್ಥರದ್ದಾಗಿದೆ. ವಾಘವಡೆಯಿಂದ ಹೊರಟಿರುವ ಈ ಪಾಲ್ಕಿ ಸದ್ಯ ಸಾವಗಾಂವ್ನಲ್ಲಿ ವಾಸ್ತವ್ಯ ಹೂಡಲಿದ್ದು, ನಂತರ ಹೊನಗಾ ಮಾರ್ಗವಾಗಿ ಸಾಗಲಿದೆ. ವಾರಕರಿಗಳು ಪ್ರತಿದಿನ ಸುಮಾರು ೨೫ ಕಿಲೋಮೀಟರ್ ಪಾದಯಾತ್ರೆ ನಡೆಸಲಿದ್ದು, ಜುಲೈ ೨೫ ರಂದು ಶ್ರೀ ಕ್ಷೇತ್ರ ಪಂಢರಪುರವನ್ನು ತಲುಪಲಿದ್ದಾರೆ ಎಂದು ಮನೋಜ್ ಬೆಳಗುಂದಕರ್ ಮಾಹಿತಿ ನೀಡಿದ್ದಾರೆ.
ವಾಘವಡೆ ಗ್ರಾಮದ ವಾರಕರಿ ಸಂಪ್ರದಾಯದವರು ಮತ್ತು ಸಿದ್ಧತೆ ಮಾಡಿದವರೆಲ್ಲರಿಗೂ ತಾವು ಚಿರಋಣಿಯಾಗಿದ್ದು, ಕರ್ನಾಟಕದಿಂದ ಇಂತಹ ಮೊದಲ ರಥೋತ್ಸವ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಮಾರುತಿ ಸೂರ್ಯವಂಶಿ ತಿಳಿಸಿದರು. ಇಂತಹ ಅದ್ಭುತ ರಥವನ್ನು ಸಿದ್ಧಪಡಿಸಿದ ಎಲ್ಲರಿಗೂ ವಿಠ್ಠಲ ಮಾವುಲಿಯು ಸದ್ಬುದ್ಧಿ ಮತ್ತು ಶಕ್ತಿಯನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದರು. ಮುಂದಿನ ವರ್ಷಗಳಲ್ಲೂ ಈ ಧಾರ್ಮಿಕ ಕಾರ್ಯವು ಇದೇ ರೀತಿ ನಿರಂತರವಾಗಿ ಮುನ್ನಡೆಯಲಿ ಎಂದು ಮಾರುತಿ ಸೂರ್ಯವಂಶಿ ಆಶಿಸಿದರು. ಸಾವಗಾಂವನ ಉತ್ತಮ ಪಾಟೀಲ್ ಮಾರ್ಗದರ್ಶನದಲ್ಲಿ ವಾಘವಡೆ ಗ್ರಾಮದ ಸಾಂಪ್ರದಾಯಿಕ ಯುವಕರು ಕರ್ನಾಟಕದಿಂದ ಮಾವುಲಿಯ ತದ್ರೂಪ ರಥವನ್ನು ಸಿದ್ಧಪಡಿಸಿದ್ದಾರೆ. ಇಂದಿನ ಕಲಿಯುಗದಲ್ಲಿ ಯುವ ಪೀಳಿಗೆಯು ವ್ಯಸನ ಮುಕ್ತರಾಗಲು ಸಾಧು-ಸಂತರು ತೋರಿಸಿದ ಮಾರ್ಗದಲ್ಲಿ ಮುನ್ನಡೆಯುವುದು ಅಗತ್ಯವಾಗಿದೆ. ಸಾಧು-ಸಂತರ ಪರಿಶ್ರಮ ವ್ಯರ್ಥವಾಗದಂತೆ ತರುಣ ಪೀಳಿಗೆಯು ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಅವರು ಕರೆ ನೀಡಿದರು.
ಆಷಾಢ ವಾರಿಯ ಅಂಗವಾಗಿ ವಾಘವಡೆ ಗ್ರಾಮದಿಂದ ಪಂಢರಪುರಕ್ಕೆ ರಥದೊಂದಿಗೆ ದಿಂಡಿ ಪ್ರವಾಸ ಬೆಳೆಸಲಾಗುತ್ತಿದೆ ಎಂದು ಸುನಿಲ್ ತಿಳಿಸಿದರು. ಮುಂಬರುವ ಪೀಳಿಗೆಗಳೂ ಸಹ ಇದೇ ರೀತಿಯ ಧಾರ್ಮಿಕ ಪರಂಪರೆಯನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗಬೇಕೆಂದು ಅವರು ಆಶಯ ವ್ಯಕ್ತಪಡಿಸಿದರು. ಯುವಕರು ವ್ಯಸನ ಮುಕ್ತರಾಗಿ, ಸಾಧು-ಸಂತರು ತೋರಿದ ಮಾರ್ಗದಲ್ಲಿ ನಡೆದು ಧಾರ್ಮಿಕತೆ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಸುನೀಲ್ ಕರೆ ನೀಡಿದರು.
