ಸಚಿವ ಸಂಪುಟ ವಿಸ್ತರಣೆ ಮತ್ತು ತಮಗೆ ಸಚಿವ ಸ್ಥಾನ ಸಿಗುವ ಕುರಿತು ರಾಮದುರ್ಗ ಶಾಸಕ ಅಶೋಕ್ ಪಟ್ಟಣ್ ಬೆಳಗಾವಿಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನಕ್ಕಿಂತ ತಮಗೆ ಸ್ವಾಭಿಮಾನವೇ ಮುಖ್ಯ ಎಂದಿರುವ ಅವರು, ಉಸಿರುರುವ ತನಕ ರಾಜಕಾರಣ ಮಾಡ್ತೀನಿ ಎಂದಿದ್ದಾರೆ.

ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮದುರ್ಗ ಶಾಸಕ ಅಶೋಕ್ ಪಟ್ಟಣ್, ಸಚಿವ ಸ್ಥಾನಕ್ಕಾಗಿ ಪದೇ ಪದೇ ಯಾರ ಹಿಂದೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಮಗೂ ಸ್ವಾಭಿಮಾನವಿದೆ, ಸಚಿವಗಿರಿಗಿಂತ ಸ್ವಾಭಿಮಾನವೇ ದೊಡ್ಡದು. ನಾವು ಪಕ್ಷಕ್ಕಾಗಿ ಶ್ರಮಿಸಿರುವುದು ಮುಖ್ಯಮಂತ್ರಿಗಳಿಗೆ ತಿಳಿದಿದೆ, ಸಮಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ವಿರೋಧ ಪಕ್ಷದವರು ನಮ್ಮನ್ನು ಕುಗ್ಗಿಸಲು ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ನಾವಂತೂ ವೀಕ್ ಆಗಲ್ಲ. ಕೆಲವರು ಚುನಾವಣಾ ರಾಜಕೀಯದಲ್ಲಿ ಕೊನೆಯ ಚುನಾವಣೆ ಎಂದು ಸುಳ್ಳು ಹೇಳುತ್ತಾರೆ, ಆದರೆ ನಾನು ಸುಳ್ಳು ಹೇಳಲ್ಲ. ನನ್ನ ಉಸಿರಿರುವ ತನಕ ರಾಜಕಾರಣ ಮಾಡುತ್ತೇನೆ, ಒಂದು ವೇಳೆ ಆರೋಗ್ಯ ಹದಗೆಟ್ಟರೆ ನನ್ನ ತಮ್ಮನ ಮಗನಿಗೆ ರಾಜಕೀಯ ಅವಕಾಶ ನೀಡುತ್ತೇನೆ ಎಂದು ತಮ್ಮ ರಾಜಕೀಯ ಭವಿಷ್ಯದ ದಾರಿಯನ್ನು ಬಿಚ್ಚಿಟ್ಟರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ನಡುವಿನ ಬಾಂಧವ್ಯದ ಕುರಿತು ಮಾತನಾಡಿದ ಅವರು, ಇಬ್ಬರೂ ನಾಯಕರು ಸರಿಯಾಗಿಯೇ ಇದ್ದಾರೆ, ಆದರೆ ಮಾಧ್ಯಮಗಳೇ ಅನಗತ್ಯ ಪ್ರಶ್ನೆಗಳನ್ನು ಕೇಳಿ ಅವರ ಮಧ್ಯೆ ಜಗಳ ತರುತ್ತಿವೆ ಎಂದು ದೂರಿದರು. ತಾವೂ ಹಿರಿಯರಾಗಿದ್ದು, ಎಲ್ಲವನ್ನೂ ನಿಯಂತ್ರಿಸುವ ಹಾಗೂ ನಿಭಾಯಿಸುವ ಕ್ಷಮತೆ ಹೊಂದಿದ್ದೇವೆಂದು ಹಿಂದೆ ಸಿದ್ಧರಾಮಯ್ಯನವರು ಹೇಳಿದ್ದರು. ಸೂಕ್ತ ಸಮಯ ಬಂದಾಗ ಸಚಿವ ಸ್ಥಾನ ನೀಡುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ಕೂಡ ಭರವಸೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ಅತ್ಯಂತ ದೊಡ್ಡದಾಗಿರುವುದರಿಂದ ಜಿಲ್ಲೆಗೆ ಇನ್ನು ಕನಿಷ್ಠ ಮೂರು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗಿದೆ ಎಂದು ಅಶೋಕ್ ಪಟ್ಟಣ್ ಇದೇ ಸಂದರ್ಭದಲ್ಲಿ ತಿಳಿಸಿದರು.
