ಬೆಳಗಾವಿಯ ಸುವರ್ಣವಿಧಾನಸೌಧದ ಮುಂಭಾಗದಲ್ಲಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ 108 ಅಡಿ ಎತ್ತರದ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆಯನ್ನು ನಿರ್ಮಿಸಬೇಕೆಂದು ಒತ್ತಾಯಿಸಿ ಸವೋದಯ ಸ್ವಯಂ ಸೇವಾ ಸಂಸ್ಥೆ ಹಾಗೂ ಸಮಾನ ಮನಸ್ಕ ಕನ್ನಡಪರ ಸಂಘಟನೆಗಳು ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಮನವಿ ಸಲ್ಲಿಸಿವೆ.

ಬೆಳಗಾವಿಯ ವಡಗಾವಿಯ ಸವೋದಯ ಸ್ವಯಂ ಸೇವಾ ಸಂಸ್ಥೆ ಕನ್ನಡಪರ ಸಂಘಟನೆ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ಬೆಳಗಾವಿ ಸುವರ್ಣ ವಿಧಾನಸೌಧದ ಮುಖ್ಯ ಪ್ರವೇಶ ದ್ವಾರದ ಬಳಿ ನಾಡದೇವಿಯ ಭವ್ಯ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು ಎನ್ನುವುದು ಕನ್ನಡಿಗರ ಸುದೀರ್ಘ ಬೇಡಿಕೆಯಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ, ವಿಜಯಪುರದಲ್ಲಿ ಬಸವೇಶ್ವರರ ಪ್ರತಿಮೆ ಮಾದರಿಯಲ್ಲಿ, ಬೆಳಗಾವಿಯಲ್ಲೂ ಇತಿಹಾಸ ಸೃಷ್ಟಿಸುವ ಸಲುವಾಗಿ ಅಧ್ಯಕ್ಷರಾದ ಶ್ರೀನಿವಾಸ ಯು. ತಾಳೂಕರ ಹಾಗೂ ಪ್ರಮುಖ ಹೋರಾಟಗಾರರಾದ ಹನುಮಂತ ಬುಚಡಿ, ಆನಂದ ಲೋಕರಿ, ಮಲ್ಲಪ್ಪ ಸೊಂಟಕ್ಕಿ, ಉದಯ ವಾಗೂಕರ, ಸಿದ್ದಪ್ಪ ಸುಗಂಧಿ ಮತ್ತು ಗುರುರಾಜ ಕಳಿಮನಿ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.
