ಕೃಷ್ಣಾ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಗಳಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಮಾಂಜರಿವಾಡಿ-ಯಡೂರವಾಡಿ ಸಂಪರ್ಕಿಸುವ ಸೇತುವೆಯ ಬಳಿ ಸುಮಾರು 5 ರಿಂದ 6 ಅಡಿ ಉದ್ದದ ಬೃಹತ್ ಮೊಸಳೆಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಕಳೆದ ಕೆಲವು ದಿನಗಳಿಂದ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಪ್ರವಾಹದ ನೀರಿನೊಂದಿಗೆ ತೇಲಿ ಬಂದಿರುವ ಈ ಮೊಸಳೆ ನದಿಯ ದಡದಲ್ಲಿ ಬಿದ್ದಿರುವುದು ಕಂಡುಬಂದಿದೆ. ನದಿಯ ತೀರದಲ್ಲಿ ಮೊಸಳೆ ವಿಶ್ರಮಿಸುತ್ತಿದ್ದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪ್ರವಾಹದ ನೀರಿನಿಂದಾಗಿ ಮೊಸಳೆಗಳು ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿಯತ್ತ ನುಗ್ಗುವ ಸಾಧ್ಯತೆ ದಟ್ಟವಾಗಿದೆ. ಇದು ನದಿ ತೀರದ ರೈತರು ಮತ್ತು ದನಕರುಗಳಿಗೆ ಅಪಾಯವನ್ನು ಉಂಟಾಗಬಹುದು ಎಂದು ರೈತರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
