Belagavi

ಬೀದಿ ವ್ಯಾಪಾರಿಗಳು ಸಂಚಾರಕ್ಕೆ ತೊಂದರೆಯಾಗುವಂತೆ ಗೂಡು, ಟೆಂಟ್ ಹಾಕಿದ್ರೆ ಕಠಿಣ ಕ್ರಮ

Share

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಸರ್ವಪಕ್ಷ ಶಾಸಕರ ಸಭೆ ಕರೆದು ಬೀದಿ ವ್ಯಾಪಾರಿಗಳ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿತ್ತು ಎಂದು ಸಿಎಂ ಡಿ.ಕೆ.ಶಿವಕುಮಾರ್ ನೆನಪಿಸಿಕೊಂಡರು. ನಗರದಲ್ಲಿ ಸುಮಾರು 60 ಸಾವಿರ ಜನರ ಸರ್ವೆ ನಡೆಸಲಾಗಿದ್ದು, ಈ ಪೈಕಿ 30 ಸಾವಿರ ಜನರು ತಳ್ಳುವ ಗಾಡಿ ವ್ಯಾಪಾರಕ್ಕೆ ಸಿದ್ಧರಾಗಿದ್ದಾರೆ. ಇವರೆಲ್ಲರಿಗೂ ಸಂಚಾರಕ್ಕೆ ಅಡ್ಡಿಯಾಗದಂತೆ ನಿಗದಿತ ಸ್ಥಳಗಳಲ್ಲಿ ವಾಹನಗಳನ್ನು ನೀಡಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು. ಸಚಿವ ಕೃಷ್ಣಭೈರೇಗೌಡರು ಕೈಗೊಂಡಿರುವ ನಿರ್ಧಾರ ವೈಯಕ್ತಿಕವಲ್ಲ, ಬೆಂಗಳೂರಿನ ಶಾಸಕರು ಹಾಗೂ ಪೊಲೀಸರು ಚರ್ಚಿಸಿಯೇ ಈ ತೀರ್ಮಾನಕ್ಕೆ ಬಂದಿದ್ದಾರೆ. ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಬಂದು ವ್ಯಾಪಾರ ಮುಗಿಸಿ ಮುಂದೆ ಸಾಗಬೇಕೇ ಹೊರತು, ರಸ್ತೆ ಬದಿಯಲ್ಲೇ ಟೆಂಟ್‌ಗಳನ್ನು ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದು ಮುಖ್ಯಮಂತ್ರಿಗಳು ಕಡಕ್ ಎಚ್ಚರಿಕೆ ನೀಡಿದರು.

ಇದೇ ವೇಳೆ ರಾಜ್ಯ ರಾಜಕಾರಣದ ಇತರೆ ಪ್ರಮುಖ ವಿಷಯಗಳ ಕುರಿತು ಮಾತನಾಡಿದ ಸಿಎಂ, ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಯಾವುದೇ ಒತ್ತಡಗಳಿಲ್ಲ ಮತ್ತು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಸಭೆ ಹಾಗೂ ಶಾಸಕರ ಒತ್ತಾಯದ ಮೇರೆಗೆ ಮೋಡ ಬಿತ್ತನೆ ಕೈಗೊಳ್ಳುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು. ಇನ್ನು ಕಿತ್ತೂರು ಕರ್ನಾಟಕ ಭಾಗದ ಸುವರ್ಣಸೌಧದ ವ್ಯಾಪ್ತಿಯ ಧರ್ಮದತ್ತಿ ಇಲಾಖೆಯ ದೇವಸ್ಥಾನಗಳ ಹುಂಡಿಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ ಸಿಎಂ, ಬೆಳಗಾವಿಗೆ ವಿಶೇಷ ಅನುದಾನ ನೀಡುವ ಕುರಿತ ಪ್ರಶ್ನೆಗೆ, “ಈಗ ತಾನೇ ಬಂದಿದ್ದೇನೆ, ಪರಿಶೀಲಿಸಿ ನೋಡೋಣ” ಎಂದು ಉತ್ತರಿಸಿ ಮುಂದೆ ಸಾಗಿದರು.

Tags:

error: Content is protected !!