ಬೆಳಗಾವಿಯಲ್ಲಿ ವರುಣನ ಆರ್ಭಟಕ್ಕೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಸಹ್ಯಾದ್ರಿನಗರದ ಪ್ರಮುಖ ಪ್ರವೇಶ ರಸ್ತೆಯಲ್ಲೇ ಚರಂಡಿ ಬ್ಲಾಕ್ ಆಗಿ ಕಳೆದ ಮೂರು ದಿನಗಳಿಂದ ಮಳೆನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.


ಬೆಳಗಾವಿಯ ಸಹ್ಯಾದ್ರಿ ನಗರದ ಪ್ರಮುಖ ಪ್ರವೇಶ ದ್ವಾರದಲ್ಲೇ ಚರಂಡಿ ಸಂಪೂರ್ಣವಾಗಿ ಬಂದ್ ಆಗಿದ್ದು, ಕಳೆದ ಮೂರು ದಿನಗಳಿಂದ ಮಳೆನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ಸಂಗ್ರಹಗೊಳ್ಳುತ್ತಿದೆ. ಗುರುವಾರ ರಾತ್ರಿಯಿಂದ ಆರಂಭವಾದ ಭಾರಿ ಮಳೆಯಿಂದಾಗಿ ಇಡೀ ಬಡಾವಣೆಯ ನೀರು ಇಲ್ಲಿನ ಚರಂಡಿಗೆ ಬಂದು ಸೇರುತ್ತಿದ್ದು, ಸದ್ಯ ರಸ್ತೆಯು ಕೆರೆಯಂತಾಗಿ ಮಾರ್ಪಟ್ಟಿದೆ. ಇದರಿಂದಾಗಿ ವಾಹನ ಸವಾರರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಓಡಾಡಲು ಪ್ರತಿದಿನ ಹರಸಾಹಸ ಪಡುವಂತಾಗಿದೆ.

ಮೇಲೆ ಉಕ್ಕಿ ಹರಿಯುತ್ತಿರುವ ಕಲುಷಿತ ಮಳೆನೀರು ಕೇವಲ ಸಂಚಾರಕ್ಕೆ ಮಾತ್ರವಲ್ಲದೆ, ಸ್ಥಳೀಯ ನಿವಾಸಿಗಳ ಮನೆ ಹಾಗೂ ಅಂಗಡಿ-ಮುಂಗಟ್ಟುಗಳಿಗೂ ನುಗ್ಗುತ್ತಿದೆ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಹ್ಯಾದ್ರಿ ನಗರದ ಸಾಯ್ ಲಾಂಡ್ರಿ ಮಾಲೀಕರಾದ ಭರತ್ ಸೂರೆಕರ್, “ಕಳೆದ ಮೂರು ದಿನಗಳಿಂದ ನಿರಂತರವಾಗಿ ತಮ್ಮ ಲಾಂಡ್ರಿ ಅಂಗಡಿ ಹಾಗೂ ಪಕ್ಕದ ಮನೆಗಳಿಗೆ ನೀರು ನುಗ್ಗಿ ತೀವ್ರ ನಷ್ಟ ಮತ್ತು ತೊಂದರೆಯಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ಸಮಸ್ಯೆಯ ತೀವ್ರತೆ ಹೆಚ್ಚಾಗಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸ್ಥಳೀಯ ಕಾರ್ಪೊರೇಟರ್ ಕೇವಲ ತಾತ್ಕಾಲಿಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಬಂದು ಕೇವಲ ಮೇಲ್ನೋಟಕ್ಕೆ ಪರಿಶೀಲನೆ ನಡೆಸಿ ವಾಪಸ್ ಹೋಗಿದ್ದಾರೆಯೇ ಹೊರತು ಯಾವುದೇ ಗಟ್ಟಿ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಉನ್ನತ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಡ್ರೈನೇಜ್ ಬ್ಲಾಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
