Belagavi

ಬೆಳಗಾವಿಯ ಮುಕ್ತಿಮಠದಲ್ಲಿ ಐಟಿಬಿಪಿ ಯೋಧರಿಂದ ವಿಶೇಷ ಪರಿಸರ ಅಭಿಯಾನ: 500 ಗಿಡಗಳ ನಾಟಿ!

Share

ಪ್ರಕೃತಿಯ ರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಈಗ ಗಡಿ ಕಾಯುವ ಯೋಧರು ಪರಿಸರ ಕಾಯಲು ಮುಂದಾಗಿದ್ದಾರೆ. ಕುಂದಾನಗರಿ ಬೆಳಗಾವಿಯ ಮುಕ್ತಿಮಠದಲ್ಲಿ ಐಟಿಬಿಪಿಯ ಹಿಮವೀರರು ಭರ್ಜರಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಕುರಿತ ಒಂದು ವರದಿ ಇಲ್ಲಿದೆ.

ಬೆಳಗಾವಿಯ ಮುಕ್ತಿಮಠದ ಆವರಣದಲ್ಲಿ ಸಿಐಜೆಡಬ್ಲ್ಯೂ (CIJW) ಶಾಲೆ ಹಾಗೂ ಐ.ಟಿ.ಬಿ.ಪಿ. (ITBP) ಸಂಸ್ಥೆಯ ಹಿಮವೀರರು ಜಂಟಿಯಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಬರೋಬ್ಬರಿ 500 ಫಲಪ್ರದ ಮತ್ತು ನೆರಳಿನ ಮರಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದಾರೆ. ಗೃಹ ಸಚಿವಾಲಯದ ವಿಶೇಷ ಆದೇಶ ಹಾಗೂ ನಿರ್ದೇಶನದ ಮೇರೆಗೆ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ಮರ ನೆಡುವ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕುರಿತು ಮಾತನಾಡಿದ ಐಟಿಬಿಪಿಯ ಅಧೀನ ಅಧಿಕಾರಿ ಶ್ರೀ ಜೈ ಕಿಶನ್ ಬನ್ಸಾಲ್ ಅವರು, “ದಿನೇ ದಿನೇ ಹೆಚ್ಚಾಗುತ್ತಿರುವ ಕಲುಷಿತ ನೀರು ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸುವುದು ಹಾಗೂ ಕಾಡಿನಲ್ಲಿರುವ ವನ್ಯಜೀವಿಗಳಿಗೆ ನೈಸರ್ಗಿಕವಾಗಿ ಆಹಾರ ಒದಗಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ” ಎಂದು ತಿಳಿಸಿದರು. ಯೋಧರ ಈ ಹಸಿರು ಕ್ರಾಂತಿಗೆ ಸ್ಥಳೀಯರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

Tags:

error: Content is protected !!