Chikkodi

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕೃಷ್ಣಾ, ದೂಧಗಂಗಾ ಒಳಹರಿವು ಹೆಚ್ಚಳ; ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಭೀತಿ

Share

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಕಲ್ಲೋಳ ಬಳಿ ಕೃಷ್ಣಾ ನದಿಗೆ ಸದ್ಯ 53 ಸಾವಿರ ಕ್ಯೂಸೆಕ್ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿ ತೀರದ ಜನರಲ್ಲಿ ಆತಂಕ ಮೂಡಿಸಿದೆ.

ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿರುವುದರಿಂದ ಕೃಷ್ಣಾ ನದಿಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 4 ರಿಂದ 5 ಅಡಿಯಷ್ಟು ನೀರು ಏರಿಕೆಯಾಗಿದೆ. ನದಿಯ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಲೇ ಇದ್ದು, ಪ್ರವಾಹದ ಭೀತಿ ಸೃಷ್ಟಿಯಾಗಿದೆ.
ಕೃಷ್ಣಾ ನದಿ ಮಾತ್ರವಲ್ಲದೆ ಚಿಕ್ಕೋಡಿ ತಾಲೂಕಿನ ಪ್ರಮುಖ ಉಪನದಿಗಳಾದ ದೂಧಗಂಗಾ ಮತ್ತು ವೇದಗಂಗಾ ನದಿಗಳಲ್ಲೂ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರಿನ ಇಷ್ಟೊಂದು ವೇಗದ ಏರಿಕೆಯಿಂದಾಗಿ ನದಿ ಪಾತ್ರದ ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಳ್ಳುವ ಹಂತಕ್ಕೆ ತಲುಪಿವೆ.

ಸಾಯಂಕಾಲದ ವೇಳೆಗೆ ಪ್ರಮುಖ ಸಂಪರ್ಕ ಕೊಂಡಿಗಳಾದ ಯಡೂರ-ಕಲ್ಲೋಳ ಹಾಗೂ ಮಲಿಕವಾಡ-ದತ್ತವಾಡ ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗುವ ಸಾಧ್ಯತೆ ಇದೆ.

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!