Chikkodi

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ನಿಪ್ಪಾಣಿ ತಾಲೂಕಿನ ಪ್ರಮುಖ ಸೇತುವೆಗಳು ಜಲಾವೃತ, ನದಿ ತೀರದ ಜನರಿಗೆ ಕಟ್ಟೆಚ್ಚರ

Share

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಗಡಿ ಭಾಗದ ನದಿಗಳಲ್ಲಿ ನೀರಿನ ಹರಿವು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ನೇರ ಪರಿಣಾಮವಾಗಿ ನಿಪ್ಪಾಣಿ ತಾಲೂಕಿನ ಒಟ್ಟು ಮೂರು ಪ್ರಮುಖ ಸಂಪರ್ಕ ಸೇತುವೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಸಂಚಾರ ವ್ಯತ್ಯಯವಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ದೂದಗಂಗಾ ಮತ್ತು ವೇದಗಂಗಾ ನದಿಗಳು ಭೋರ್ಗರೆದು ಹರಿಯುತ್ತಿವೆ. ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು,ನದಿ ಪಾತ್ರದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.
ವೇದಗಂಗಾ ನದಿಯ ಉಕ್ಕಿ ಹರಿಯುತ್ತಿರುವುದರಿಂದ ಬಾರವಾಡ-ಕನ್ನೂರ ಹಾಗೂ ಬೋಜವಾಡಿ-ಗಜವರವಾಡಿ ಗ್ರಾಮಗಳನ್ನು ಜೋಡಿಸುವ ಸೇತುವೆಗಳು ಜಲಾವೃತಗೊಂಡಿವೆ.
ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಬರುವ ರಾಜಾಪುರ-ಜುಗಳ ಸೇತುವೆಯೂ ಕೂಡ ನೀರಿನ ಅಡಿಯಲ್ಲಿ ಸಿಲುಕಿದ್ದು, ಗಡಿ ಭಾಗದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ವೇದಗಂಗಾ ಮತ್ತು ದೂದಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಹಾಗೂ ಜಾನುವಾರುಗಳು ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು ಎಂದು ತಾಲೂಕು ಆಡಳಿತ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದೆ.

Tags:

error: Content is protected !!