ಕಾಲುದಾರಿ ವಿಚಾರವಾಗಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಜಮೀನು ವಿವಾದ ಕೊನೆಗೆ ಮಹಿಳೆ ಮೇಲೆ ಕೊಯ್ತಾದಿಂದ ಮಾರಣಾಂತಿಕ ಹಲ್ಲೆ ನಡೆಯುವ ಮಟ್ಟಕ್ಕೆ ತಲುಪಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೊನಕಲ್ ಗ್ರಾಮದಲ್ಲಿ ನಡೆದಿದೆ.


ಹೊನಕಲ್ ಗ್ರಾಮದ ನಾಗು ಮಾದರ ಹಾಗೂ ವಾಸುದೇವ ಪಾಟೀಲ ಅವರ ಜಮೀನುಗಳು ಅಕ್ಕಪಕ್ಕದಲ್ಲಿದ್ದು, ಜಮೀನಿನಲ್ಲಿರುವ ಕಾಲುದಾರಿ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ತನ್ನ ಜಮೀನಿನ ಮೂಲಕ ಯಾರೂ ಓಡಾಡಬಾರದು ಎಂದು ವಾಸುದೇವ ಪಾಟೀಲ ಆಗಾಗ ತಕರಾರು ಮಾಡುತ್ತಿದ್ದನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ನಾಗು ಮಾದರ ಅವರ ಜಮೀನಿನ ಭಾಗವನ್ನು ಅತಿಕ್ರಮಿಸಿಕೊಂಡಿರುವ ಆರೋಪವೂ ಕೇಳಿಬಂದಿದೆ.
ಶನಿವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಶೋಭಾ ಮಾದರ ಅವರ ಬಳಿ ಕೊಯ್ತಾ ಹಿಡಿದು ಬಂದ ವಾಸುದೇವ ಪಾಟೀಲ, ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಕೊಯ್ತಾದಿಂದ ತಲೆಗೆ ಹಾಗೂ ಕೈಗಳಿಗೆ ಬಲವಾಗಿ ಹೊಡೆದ ಪರಿಣಾಮ ಶೋಭಾ ಅವರಿಗೆ ಗಂಭೀರ ಗಾಯಗಳಾಗಿ ಹೆಚ್ಚಿನ ರಕ್ತಸ್ರಾವವಾಗಿದೆ.
ಗಲಾಟೆ ಬಿಡಿಸಲು ಮುಂದಾದ ಜಾನಕು ಮಾದರ ಅವರ ಮೇಲೂ ಆರೋಪಿ ಹಲ್ಲೆ ನಡೆಸಿದ್ದು, ಅವರಿಗೂ ಗಾಯಗಳಾಗಿವೆ. ಹಲ್ಲೆಯಿಂದ ತಪ್ಪಿಸಿಕೊಂಡ ಶೋಭಾ ಮಾದರ ಜಮೀನಿನಿಂದ ಗ್ರಾಮಕ್ಕೆ ಓಡಿ ಬಂದಿದ್ದು, ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿದ ಖಾನಾಪುರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹಾಗೂ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಶೋಭಾ ಅವರ ಪತಿ ನಾಗು ಮಾದರ ನೀಡಿದ ದೂರಿನ ಆಧಾರದ ಮೇಲೆ ವಾಸುದೇವ ಪಾಟೀಲ ವಿರುದ್ಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
