ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಕಡೆ ಅವಾಂತರಗಳು ಸೃಷ್ಟಿಯಾಗುತ್ತಿವೆ. ನಗರದ ಖಾಸಬಾಗ್ ಪ್ರದೇಶದ ಉಪ್ಪಾರ ಗಲ್ಲಿಯಲ್ಲಿ ಬೃಹತ್ ಹುಣಸೆ ಮರ ಧರೆಗುರುಳಿದ ಪರಿಣಾಮ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ.


ಹೌದು. ನಿರಂತರ ಮಳೆಯಿಂದಾಗಿ ನಿನ್ನೆ ಸಂಜೆ ಬೃಹತ್ ಹುಣಸೆ ಮರ ಏಕಾಏಕಿ ಉರುಳಿ ಬಿದ್ದಿದೆ. ಈ ವೇಳೆ ಮರದ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿದ್ದ ನಾಲ್ಕು ಕುಟುಂಬಗಳ ಸದಸ್ಯರೂ ಯಾವುದೇ ಪ್ರಾಣಹಾನಿಯಾಗದೇ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಅನಿಲ್ ಮುಟ್ಕೇಕರ್ ಅವರ ಮನೆಯ ಗೋಡೆ ಕುಸಿದಿದ್ದು, ಆನಂದ್ ಭದ್ವಾಂಕರ್, ಏಕನಾಥ್ ಭದ್ವಾಂಕರ್ ಹಾಗೂ ಪ್ರಶಾಂತ್ ಗೋರ್ಲೆ ಅವರ ಮನೆಗಳ ಮುಂಭಾಗಕ್ಕೂ ತೀವ್ರ ಹಾನಿಯಾಗಿದೆ. ಘಟನೆಯಿಂದ ಮನೆಗಳ ಮುಂಭಾಗದಲ್ಲಿದ್ದ ವಸ್ತುಗಳು ಜಖಂಗೊಂಡಿದ್ದು, ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವು ಕಾರ್ಯಾಚರಣೆ ನಡೆಸಿದರು. ಸುದೀರ್ಘ ಕಾರ್ಯಾಚರಣೆಯ ಬಳಿಕ ರಸ್ತೆ ಸಂಚಾರವನ್ನು ಸುಗಮಗೊಳಿಸಲಾಯಿತು.ಈ ಘಟನೆ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ನಿರಂತರ ಮಳೆಯಿಂದ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳೀಯರು ನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.

