Khanapur

ಖಾನಾಪೂರ: ಕಣಕುಂಬಿ, ಜಾಂಬೋಟಿ ಭಾಗದಲ್ಲಿ ಮಳೆರಾಯನ ಆರ್ಭಟ; ಮೈದುಂಬಿ ಹರಿಯುತ್ತಿದೆ ಜೀವನದಿ ಮಲಪ್ರಭೆ!

Share

ಪ್ರಕೃತಿಯ ಸೌಂದರ್ಯದ ಮಡಿಲಲ್ಲಿರುವ ಖಾನಾಪೂರ ತಾಲೂಕಿನ ಕಣಕುಂಬಿ ಹಾಗೂ ಜಾಂಬೋಟಿ ಭಾಗದಲ್ಲಿ ಮಳೆರಾಯನ ನರ್ತನ ಜೋರಾಗಿದೆ. ದೇಶದ ಭೂಪಟದಲ್ಲಿ ಗುರುತಿಸಿಕೊಂಡಿರುವ ಮಲಪ್ರಭಾ ನದಿಯ ಉಗಮ ಸ್ಥಾನದಲ್ಲಿ ಈಗ ಜಲವೈಭವ ಶುರುವಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವ ಮನಮೋಹಕ ದೃಶ್ಯಗಳು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿವೆ.

ಕಾಡಂಚಿನ ಸುಂದರ ಪರಿಸರವನ್ನು ಹೊಂದಿರುವ ಖಾನಾಪೂರ ತಾಲೂಕಿನಲ್ಲಿ ವರುಣನ ಕೃಪೆ ಸೃಷ್ಟಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಜೂನ್ ತಿಂಗಳಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ಕಣಕುಂಬಿ ಮತ್ತು ಜಾಂಬೋಟಿ ಭಾಗದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಭಾರೀ ಮಳೆಯಿಂದಾಗಿ ಪ್ರಕೃತಿಯ ಮಡಿಲಿನಲ್ಲಿ ಚಿಕ್ಕ ಚಿಕ್ಕ ಹಳ್ಳ-ಕೊಳ್ಳಗಳು ಸೃಷ್ಟಿಯಾಗಿದ್ದು, ನೀರು ಧುಮ್ಮಿಕ್ಕಿ ಹರಿಯುವ ದೃಶ್ಯಗಳು ಪ್ರವಾಸಿಗರನ್ನು ಹಾಗೂ ಪರಿಸರ ಪ್ರೇಮಿಗಳನ್ನು ರೋಮಾಂಚನಗೊಳಿಸುತ್ತಿವೆ. ಕಣಕುಂಬಿಯ ಹಚ್ಚಹಸಿರಿನ ಕಾಡಿನ ನಡುವೆ ವರುಣನ ಈ ನರ್ತನ ಇಡೀ ತಾಲೂಕಿಗೆ ಹೊಸ ಕಳೆಯನ್ನು ತಂದಿದೆ.

ವಿಶೇಷವಾಗಿ, ರೈತರ ಜೀವನಾಡಿಯಾದ ಮಲಪ್ರಭಾ ನದಿಯ ಉಗಮ ಸ್ಥಾನದಲ್ಲಿ ಮಳೆ ಚುರುಕಾಗಿರುವುದರಿಂದ ನದಿಯು ನಿಧಾನವಾಗಿ ಮೈದುಂಬಿ ಹರಿಯಲಾರಂಭಿಸಿದೆ. ಇದು ಸವದತ್ತಿ ಸೇರಿದಂತೆ ಮಲಪ್ರಭಾ ನದಿ ತೀರದ ಲಕ್ಷಾಂತರ ರೈತ ಬಾಂಧವರಲ್ಲಿ ಹೊಸ ಭರವಸೆ ಮೂಡಿಸಿದ್ದು, ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದೇ ರೀತಿ ಇನ್ನು ಒಂದೆರಡು ವಾರಗಳ ಕಾಲ ಸತತವಾಗಿ ಮಳೆ ಮುಂದುವರಿದರೆ ನವಿಲುತೀರ್ಥ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲಿದ್ದು, ಅನ್ನದಾತರ ಬದುಕು ಹಸನಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Tags:

error: Content is protected !!