ಪಟ್ಟಣದಲ್ಲಿ ಕಳೆದ ಕೆಲವು ಗಂಟೆಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸಾರ್ವಜನಿಕರು ತತ್ತರಿಸಿ ಹೋಗಿದ್ದು,ಬಸವೇಶ್ವರ ವೃತ್ತದ ಬಳಿ ಇರುವ ನ್ಯಾಯಾಲಯದ ಆವರಣವು ಸಂಪೂರ್ಣವಾಗಿ ಕೆರೆಯಂತಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಮತ್ತು ವಕೀಲರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಜಾಗವಿಲ್ಲದ ಕಾರಣ, ಇಡೀ ಕೋರ್ಟ್ ಆವರಣದಲ್ಲಿ ಮೊಣಕಾಲುದ್ದ ನೀರು ನಿಂತು ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ನ್ಯಾಯಾಲಯದ ಕೆಲಸ ಕಾರ್ಯಗಳಿಗಾಗಿ ಬಂದ ಸಾರ್ವಜನಿಕರು ಹಾಗೂ ವಕೀಲರು ಅನಿವಾರ್ಯವಾಗಿ ಇದೇ ನೀರಿನಲ್ಲೇ ನಡೆದುಕೊಂಡು ಹೋಗಿ ಕಲಾಪಗಳಲ್ಲಿ ಭಾಗವಹಿಸುವಂತಾಯಿತು.
ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಮರುಕಳಿಸುತ್ತಿದ್ದರೂ, ಶಾಶ್ವತ ಚರಂಡಿ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಎಚ್ಚೆತ್ತ ಸಿಬ್ಬಂದಿ ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ತರಿಸಿ ನೀರು ಹರಿದು ಹೋಗಲು ತುರ್ತು ದಾರಿ ಮಾಡಿಕೊಟ್ಟರು. ಸದ್ಯ ನೀರು ಹೊರಹೋಗುವಂತೆ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದ್ದರೂ, ಮಳೆ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೋರ್ಟ್ ಆವರಣದಲ್ಲಿ ಸುಗಮ ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ
